Friday, September 17, 2010

ಗಣೇಶ ಬಂದ ... ..

 ಪ್ರಸಂಗ 1
ಶಂಕರ ಶಾಸ್ತ್ರೀಗಳು ಪೂಜೆಗೆ ಗಣೇಶನ ತರೋಕ್ಕೆ ಅಂಗಡಿಗೆ ಹೋಗ್ತಾರೆ, ಮಳೆ ಶುರುವಾಗೊತ್ತೆ. ಅಂಗಡಿಯವರು ಎಲ್ಲಾ ಗಣೇಶರನ್ನು ಒಳಗಡೆ ಇಟ್ಟುಬಿಟ್ಟಿರ್ತಾರೆ.ಅ ಏರಿಯ ದಲ್ಲಿ ಇರೋದು ಒಂದೇ ಅಂಗಡಿ ಬಹಳ demand ಇರೊತ್ತೆ. ಗಜಗಾತ್ರದ ಶಂಕರ ಶಾಸ್ತ್ರೀಗಳು ದಸರಾ ಪ್ರೊಸೆಶನ್ ಆನೆ ತರಹ ಬರೋ ಹೊತ್ತಲ್ಲಿ, ಅಂಗಡಿಯವಳು ಮಳೆಯಿಂದ ಕಾಪಾಡಲು ಗಣೇಶರನ್ನು ಒಳಗಿಟ್ಟು ತನ್ನ ಕುಡುಕ , ವೇಸ್ಟ್ ಬಾಡಿ ಗಂಡನಿಗೆ ಜವಾಬ್ದಾರಿ ಕೊಟ್ಟು ಹೊರಡುತ್ತಾಳೆ. ಗಂಡ ಮುನಿಯಂಕಟ ಸದಾ 'ರಿಚ್' ಆಗಿರ್ತಾನೆ.
ಶಾಸ್ತ್ರೀಗಳು ಓಸ ಅಬ್ಬ ಅಂತ ಅಂಗಡಿಗೆ ಕಾಲಿಡ್ತಿರೋಹಾಗೆ, ಶಾಸ್ತಿಗಳು ಹೊಟ್ಟೆಗೆ ಕೈಹಾಕಿ ಮುನಿಯಾ ಎಳೆಯುತ್ತಾನೆ. "ಲೇ ದರಿದ್ರ ಯೆನೋಮಾಡ್ತಾ ಇದಿಯ್ಯ" ಅಂದ್ರು ಶಾಸ್ತಿಗಳು.
ಮುನಿಯ : ಸೆಮ್ಸಿ ! ಅಣೆಸ ಎಲ್ಲಾ ನನ್ನ ಎಂಡ್ತಿ ಒಳಗಡೆ ಇಕ್ಕಿದ್ಲು , ದೊಡ್ಡ ಅಣೆಸ ನ ಮರ್ತವ್ಲೇ ಅಂತ ನಿಮಗೆ ಕೈಹಾಕಿದೆ.
            ಏನ್ ಸಾಮಿ ಮುಕಾಡ ಅಕೊಂಡ್ರೆ ನೀವು ಅಂಗೆ ಕಾಣ್ತೀರ.
ಶಾಸ್ತಿಗಳು: (ಕೋಪದಿಂದ) ಲೇ ನನ್ಗೆ ಗಣೇಶ ಕೊಡೊ !
ಮುನಿಯ: ೩ ಅಡಿದು ಬೇಕೋ ? 6 ಅಡಿದು ಬೇಕೋ ? 1 ಅಡಿದು ಬೇಕೋ ? ಸಾಮಿ
ಶಾಸ್ತಿಗಳು: ಒಂದು ಅಡಿದು !
ಮುನಿಯ : ಕುಂತಿರದೋ , ನಿಂತಿರದೋ ?
ಶಾಸ್ತಿಗಳು: ಕೂತಿರದು
ಮುನಿಯ: ಚಕ್ಕಂ ಬಕ್ಳ ಹಾಕೊಂಡಿರೋದೋ ? ಒಂದು ಕಾಲು ಬಿಟ್ಕೊಂದಿರೋದ.
ಶಾಸ್ತಿಗಳು:ಒಂದು ಕಾಲು ಬಿಟ್ಕೊಂದಿರೋದದೇ ಕೊಡೊ ಪ್ರಾರಬ್ಧ..
ಮುನಿಯ : ಬಲಮುರಿನೋ ? ಎಡಮುರಿನೋ ?
ಶಾಸ್ತಿಗಳಿಗೆ ಕರ್ಪೂರ ಇಟ್ಟು ಬೆಂಕಿ ಹಚ್ಚಿದಹಾಗೆ ಆಯಿತು .
ಶಾಸ್ತಿಗಳು:ಬಲಮುರಿ ಕೊಡೊ ಬೇಕೂಪ್ಹ !
ಮುನಿಯ : ಸೊಂಡ್ಲಲ್ಲಿ ಕಡಬು ಇರೋದೋ ? ಇಲ್ಲದಿರೋದೋ ?
ಶಾಸ್ತಿಗಳು ಅಸಹಾಯಕರಾಗಿದ್ರು , ಗಣೇಶಗಳನ್ನ ಮನೆಯೊಳಗೇ ಇಟ್ಟಿದ್ದ, ಒಳಗಡೆ ತಾವೇ ಹೋಗೋಣ ಅಂದ್ರೆ .' ಯಾರ್ಯಾರೋ ನೋಡಿದ್ರೆ ? ಅಂತ ಸಹನೆ ಇಂದ ಕುಡುಕನ ಮಾತಿಗೆ ಬೆಲೆ ಕೊಡ್ತಿದ್ರು.
ಶಾಸ್ತಿಗಳು: ನೋಡಪ್ಪ ! ಸೊಂಡ್ಲಲ್ಲಿ ಕಡಬು ಇರೋದು ಶ್ರೇಷ್ಠ ! ಅದೇ ಕೊಡು
ಮುನಿಯ : ಸಾಮಿ ! ಸೀಕಡ್ಬು ಇರೋದೋ , ಖಾರದ್ದು ಬೇಕೋ ಸಾಮಿ.
ಶಾಸ್ತಿಗಳು: ನಿನ್ ಪಿಂಡ ಇರೋದು ! ಇದ್ಯಾ ?
ಮುನಿಯ : ಕೋಪ ಮಾಡ್ಕೋಬೇಡಿ ಸಾಮಿ ! ನೀವು ಗಿರಾಕಿ ಅಲ್ವ ನಿಮಗೆ ಸರಿಯಾದ ಗಣೇಶ ಕೊಟ್ಟರೆ ನಮಗೂ ಖುಷಿ.
ಶಾಸ್ತಿಗಳು:ಗಣೇಶ ಸೀಕಡ್ಬು ತಿನ್ನೋದು, ಖಾರ ಯಾವತ್ತ್ತು ತಿನ್ನೋಲ್ಲ , ಸುಡುಗಾಡು ! ಸೀಕಡ್ಬು ಇಟ್ಟುಕೊಂಡಿರೋದ್ದನ್ನೇ ಕೊಡಯ್ಯ!
ಮುನಿಯ :ಸಾಮಿ ! ಇಲಿ ಇರೋದು ಬೇಕೋ , ಇಲ್ಲದೆ ಇರೋದು ಬೇಕೋ ?
ಶಾಸ್ತಿಗಳು ಸಹನೆ ಕೆಡೋಕ್ಕೆ ಶುರುವಾಯಿತ.
ಶಾಸ್ತಿಗಳು:ಇಲಿ ಅವನ ವಾಹನ ! ಅದು ಇರ್ಲೆಬೇಕಯ್ಯ !
ಮುನಿಯ: ಸಾಮಿ , ಸೊಂಡಿಲಿ ಇರೋದೋ , ಮೂಗಿಲಿ ಇರೋದೋ ಬೇಕೋ?
ಶಾಸ್ತಿಗಳು: ನಿನ್ ಹೆಣ , ಹೆಗ್ಗಣ ಇಲ್ವಾ ? ವಿಭೂತಿ ಪಟ್ಟಿ ಇರೋದು ಕೊಡೊ ಮಾರಾಯ !
ಮುನಿಯ: ಸಾಮಿ ! ಇಬುತಿ , ಪಟ್ಟಿ . ಬಿಳೀದು ! ಅದೇ ಮೂರ್ ಪಟ್ಟಿ . ! ಮೊದಲೇ ಯೆಳದಲ್ವ , ಅದು ಸ್ಟಾಕ್ ಇಲ್ಲ ಸಾಮಿ ! ನಾಳೆ ಬನ್ನಿ ನಾನೇ ಇರ್ತೀನಿ,ಕೊಡ್ತೀನಿ.
ಶಾಸ್ತಿಗಳು Dr ರಾಜ್ ಭಕ್ತ ಕುಂಬಾರನ ಪಾತ್ರ ನೆನುಸ್ಕೊಂಡು, ಮುನಿಯನ್ನ ಹಾಕೊಂಡು ಚನ್ನಾಗಿ ತುಳಿತಾರೆ!

ಪ್ರಸಂಗ 2
ಕ್ಯಾತ್ಮಾರನಹಳ್ಳಿ ಗ್ರಾಮ ನೆರಯಿಂದ ಜಲಾವೃತ ಗೊಂಡಿತ್ತು , ಎಲ್ಲಾ ಜನರು ದೇವರನ್ನು ಬೇಡುತಿದ್ದರು. ಇನ್ನೊಂದು ದಡದಲ್ಲಿ ಸಾಕ್ಷಾತ್ ಗಣೇಶ ತನ್ನ ಇಲಿಯೊಡನೆ bean ಬ್ಯಾಗ್ ಮೇಲೆ ವಿರಾಜಮಾನನಾಗಿ , ಎಡಕೈನಲ್ಲಿ popcorn ಡಬ್ಬದಲ್ಲಿ ಮೋದಕವನ್ನ ತಿನ್ನುತ್ತಾ, ಜಲಾವೃತ ಗೊಂಡ ಪ್ರದೇಶ ವನ್ನು PVR ಥಿಯೇಟರ್ ನಲ್ಲಿ ಸಿನಿಮಾ ನೋಡುವರೀತಿಯಲಿ ಕೂತಿರುತ್ತಾನೆ.

ಜನರು ಹೇ ದೇವ ನಮ್ಮನು ಕಾಪಾಡು ಎನ್ನಲ್ಲು , ಗಣೇಶ ಇಲ್ಲವೆಂದು ಕೈ ಆಡಿಸುತ್ತಾನೆ.

ಗಣೇಶ: ನಾನು ರಜೆನಲ್ಲಿ ಇದ್ದೀನಿ , i am ಸಾರೀ.
ಜನ : ದೇವ್ರೇ , ನಾವೆಲ್ಲಾ ನೀರಲ್ಲಿ ಮುಳುಗತಾ ಇದ್ದಿವಿ, ನಿಂಗೆ ಕರುಣೆ ಇಲ್ವಾ ?
ಗಣೇಶ : ಕರುಣೆ ನಾ ! ಕಳ್ಳನನ್ಮಕ್ಕಳ , ವಿಸರ್ಜನೆ ದಿನ ಎಲ್ಲರೂ ಸೆರೆ ನನ್ನ ನೀರಲ್ಲಿ ಮುಳುಗಿಸಿ ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು
           ಡಾನ್ಸ್ ಆಡ್ತೀರ. ನೀರು ಖಚದ ಇರೊತ್ತೆ ಇಲ್ಲವೋ ನೋಡೋದೇ ಇಲ್ಲ. ಇನ್ ಕೆಲವರು ಭಾವಿ ಮೇಲಿಂದ  ಎಸಿತಾರೆ ,
           ನೆನುಸ್ಕೊಂಡ್ರೆ ಭಯ ಆಗೊತ್ತೆ. ಯಾವತ್ತದ್ರೋ ನನ್ಗೆ ಈಜು ಬರೋತ್ತೋ ಇಲ್ವೋ ಅಂತ ಕೇಳಿದ್ದಿರಾ?

          ನನ್ನನ ಕೂರಿಸ್ತೀರ , ಫುಲ್ ಗಲಾಟೆ ಮಾಡ್ತಿರ್ತೀರ. ಸುಮಾರ್ ವರುಷದಿಂದ "ಗಜಮುಖನೇ ಗಣಪತಿಯೇ......."
          ಹಾಡಿಂದ ಪ್ರಾರಂಭ ಮಾಡ್ತೀರ , ಬ್ಲೂ ಬಾಯ್ಸ್ , ವೈಟ್ ಬಾಕ್ಸ್ orchestra ಕರ್ಸಿ , item ಸಾಂಗ್ ಹಾಡ್ಸ್ತೀರ.
          ನನ್ನ ಹೆಸರಿನ್ನಲಿ collection ಬೇರೆ ! 50 % ಖರ್ಚ ಮಾಡಿ , ಇನ್ 50% ನಲ್ಲಿ ವಿಸರ್ಜನೆ ಆದ next ಡೇ ಗೋವಾ ದಲ್ಲಿ
          ಇರ್ತೀರಾ.

          ಮಧ್ಯದಲ್ಲಿ ಫಿಲ್ಮ್ ಶೋ ಬೇರೆ. ಇಷ್ಟು ದಿನ ವಿಷ್ಣುವರ್ಧನನ 'ಲೋಡ್ದೆ' ಅಂತ ಏಕೆ ಕರಿತಾರೆ ಅಂತ ಕೊತಾಗ್ ಇರಲಿಲ್ಲ ,
          ಹೇಗೆ ಗೊತ್ತಾಗಬೇಕು ? ನನ್ನ್ಮಕ್ಳ ಸಿನಿಮಾ ಸ್ಕ್ರೀನ್ ನನ್ಮುಂದೆ ಕಟ್ಟಿ ಆ ಕಡೇ ನೀವು ಸಿನಿಮಾ ನೋಡ್ತಿದ್ರೆ , ನನ್ಗೆ
          ವಿಷ್ಣುವರ್ಧನ್ 'ಲೋಡ್ದೆ' ಅಂತ ಹೇಗೆ ಗೊತ್ತಾಗಬೇಕು ?.
          (ಹೆಚ್ಚಾಗಿ ಎಡಗೈ ಉಪಯೋಗಿಸುವವರನ್ನು  'ಲೋಡ್ದೆ' ಎಂದು ಕರೆಯುತ್ತಾರೆ)

           swine flue ಬಂದಾಗ, ಬಡ್ಡಿ ಮಕ್ಳಾ ! ನೀವೇ ಬಾಯಿಗೆ ಬಟ್ಟೆ ಕಟ್ಕೊಂಡ್ರೀ, ನನ್ಗೆ ಕಟ್ಟಿದ್ರಾ ?.
          ಯಾವ್ದೋ ಪುಜಾರಿ ನಿಮ್ಗಳಿಗೆ ಸಂಸ್ಕೃತ ಬರೋಲ್ಲ ಅಂತ , ಬರೀ ತಿಥಿ ಮಂತ್ರ ಹೇಳಿ ಕಾಸ್ಕಿತ್ಕೊಂಡು ಕಡಬು
          ಕದ್ದುಕೊಂಡು ಹೋದ. ಹೆಣದ ಮುಂದೆ ತಮಟೆ ಬಾರಿಸೋ ನನ್ಮಕ್ಕಳ ಕರ್ಕೊಂಡು ಬಂದು , " ಹರಿಶ್ಚಂದ್ರ " ಫಿಲ್ಮ್ ದು
          ಡಾನ್ಸ್ ಬೇರೆ !.

           ಇನ್ ಕೆಲವು ಸಲಿ ಕರ್ನಾಟಕ ಸಂಗೀತ , ಅವರುಗಳು ಆಲಾಪನೆ ಮಾಡಿದ್ರೆ 3 ತಾಸು ಹಿಡಿಯತ್ತೆ, ಇನ್ನು ಕೀರ್ತನೆ
           ಹೇಳೋದು ಯಾವಾಗಲೋ. 10 ದಿನ ಪ್ರೋಗ್ರಾಮ್ ನಲ್ಲಿ , orchestra , ಪೋಲಿ ನಾಟಕ , ಕಿತ್ತೋಗಿರೋ ಹಳೆ
           ಪತ್ತೇದಾರಿ ಚಿತ್ರ. ಹರಿ ಕಥೆ , ಅ ನನ್ ಮಕ್ಕಳು ಕುಡುಕೊಂಡು ಗಣೇಶನ ಕಥೆ ಅಂತ ಶುರುಮಾಡಿ , ಲಂಕಾ ದಹನ
           ಅಂತ ಎಂಡ್ ಮಾಡ್ತಾರೆ, ನಿಮಗೂ ಗೊತ್ತಾಗೊಲ್ಲ. ಗಣೇಶ pashto? ರಾಮ pashto? ಅಂತೀರಾ. ಇದು ಸಾಲದು
           ಅಂತ ಲಾರಿ ಮೇಲೆ ನನ್ನ ಮೆರೆವಣಿಗೆ. ಎಲೆಕ್ಟ್ರಿಕ್ ಕೇಬಲ್ ಕಳಗಡೆ ಹೋಗಬೇಕಾದ್ರೆ ಎಷ್ಟು ದಿಗಿಲು ಆಗೊತ್ತೆ ಅಂತ
          ನಿಮ್ಗೆನ್ ಗೊತ್ತು ?

          ರೆಸ್ಕು ಟೀಂ ಕರೆದು ಬಚಾವ್ ಆಗಿ ! ಸಾರೀ ನಾನು ರಜೆನಲ್ಲಿ ಇದ್ದೀನಿ .

ಬಿಲ್ಲಾ ರ‍ಂಗ

ಲಾಲ್ಬಾಗ್ನ ದೄಶ್ಯ
ಬೆಳಿಗ್ಗೆ ಕೆಲವ್ರು ಒಡ್ತಾಇದ್ರು, ಕೆಲವ್ರು ಮೈನ್ ರೊಡ್ನಲ್ಲಿ risk ತೊಗೊಂಡು brisk walk ಮಾಡ್ತಾಇದ್ರು.
laughing clubನವರು ವಜ್ರಮುನಿ ತರಹ ನಗುತ್ತಾಇದ್ರು,ಕೆಲವರು ಕಾಸ್ ಕೊಟ್ಟು ಕಸದ ರಸ ಕುಡಿತಾಇದ್ರು, footpathನಲ್ಲಿ.
ಕೆಲುವರು ತಿನ್ನೋದ್ರಬಗ್ಗೆ ಯೊಚನೆ," ರಾ ಅನ್ನ ವಿದ್ಯಾಥಿ೯ ಭವನ್ ಪೊಯಿ ದೋಸೆ ತಿಂಟಾಮು",ಪ್ರತಿಯಾಗಿ " ಒದ್ದು ಇಪ್ಪಡೆ ವಚ್ಚಿ mtr ಲೊ ದೊಸ್ಲು ಇಡ್ಲಿ ತಿನ್ನ್ಕೊನ್ನಿ jogging ಚೇಸ್ತಾಉನ್ನಾನು, ಇಂಕೊಕ್ಟಿ round ಕೊಟ್ಟಿ ತರವಾತ ವಸ್ತಾನು".

ಹೀಗೆ ಎಲ್ಲಾ ಮಾಡುವುದುಹೊಟ್ಟೆಗಾಗಿ , ಎಲ್ಲಾರು ಓಡುವುದು ಕೊಲೆಸ್ಟ್ರೊಲ್ಗಾಗಿ ಅಂತ ಅವರವರ ಪಾಡಿಗೆ ಓಡ್ತಾದ್ರು.
parkನ ಒಳಗಡೆ ಎರಡು ನಾಯಿಮರಿಗಳು ಅನಾಥವಾಗಿ ಬಿದ್ದಿದ್ವು. ಇದನ್ನ ಕಂಡ ಜಾವಿದ್ ಮತ್ತು ಅನಂತಕೃಷ್ಣರಿಗೆ ಕನಿಕರ ಬಂತು.

ಅನಂತ: ರಿ ಸಾಹೆಬ್ರೆ ಎಷ್ಟು ಮುದ್ದಾಗಿದೆ ನೋಡ್ರಿ, ಯಾವುದೊ ಒಳ್ಳೇ ಜಾತಿ ನಾಯಿ ತರಹ ಕಾಣ್ತಾಯಿದೆ.
ಜಾವಿದ್:ಹೌದ್ರಿ, ಅಂತೂ (ಅನಂತ) ಇದು ಬನ್ಬಿಟ್ಟಿ ಲಾಬ್ರೆಡಾರ್ ತರ ಇಲ್ಲಾ?, ಸ್ವಲ್ಪ ಕಪ್ಪು ಇದೆ, ಯಾರೊ ಇಸ್ಕೊ ಛೋಡ್ಲಾಲ್ಕೆ ಹೊಗ್ಬಿಟ್ಟಿದ್ದಾರೆ.
ಅನಂತ: ರಸೂಲ್ marketನಲ್ಲಿ ಎಷ್ಟು ಇರಬಹುದು ಇದರ ಬೆಲೆ?
ಜಾವಿದ್: ಎರಡು ಸಾವಿರದಿಂದ ಮೂರ್ ಇರ್ಬಹುದು. ಒನ್ದು ಕೆಲ್ಸ ಮಾಡಿದ್ರೆ ? ಒಂದು ನೀವು ಒಬ್ಬ್ರುನಾ ತೊಗೊಳ್ಳಿ ಇನ್ನೊಬ್ರುನಾ ನಾವು ಇಟ್ಕೊತೀವಿ. ಇಬ್ರು ಬನ್ದಿಬಿಟ್ಟಿ ಪಕ್ಕದ ರೊಡ್ ಅಲ್ಲಾ.
          ಅಣ್ಣಾ ನಮ್ಮನ್ನೆ ತಮ್ಮ ನಿಮ್ಮನೆ. ಹೇಗೆ idea.
ಅನಂತ: (ಅಸಹಾಯಕ ನಗು ನಗುತ್ತ) ನಮ್ಮ ಮನೇಲಿ ಸ್ವಲ್ಪ ಕಷ್ಟ.
ಜಾವಿದ್:ನಮ್ಮareaದಲ್ಲಿ ಕಳ್ತನಾ ಜಾಸ್ತಿ, ಚೋಂರಾ ಆಕೆ,ರಾತ್ ಕೊ ಛೊಡ್ಕೆ ಬೆಳ್ಳಿಗೆ ಲೂಟಿ ಮಾಡ್ತವ್ರೆ, ನಾಯಿ ಇದ್ರೆ ಮನೆ ಕಾಯ್ತದೆ.
ಅನಂತ: ಅದು ಸರಿ , ನಮ್ಮ ಅಮ್ಮ ಎನ್ಹೆಳ್ತಾಳೊ? ಅದೆ ಭಯ.

 ಅನಂತ ಭಯದಲ್ಲೆ ಒನ್ದು ಮರಿನ ತೊಗೊಂಡ ಹೊರಟ.  ಅನಂತ ಮನೆಗೆ ಕಾಲ್ ಇಡ್ತಿದ್ದ ಹಾಗೆ "ಯಾವುದೊ ಇದು ಅನಿಷ್ಟಾ " ಅಂದ್ರು ಅನಂತು ಮಾತೃಶ್ರೀ ಸೀತಮ್ಮ.ಸೀತಮ್ಮ ವಯಸ್ಸಾದ ವಿಧವೆ ಮನೆಯ remote control ಎಲ್ಲಾ ಅವರ ಕೈಲೆ. ಬಾಯಿ ಬಿಟ್ರೆ ಹೊಲಸು ಮಾತು.ಮನೆ ಹಾಳ್ ಬುದ್ದಿ, ಊರಿಗೆಲ್ಲಾ ಹಂಚಿದ್ರು ಇನ್ನಾ ಮಿಗ್ತಾಇತ್ತು.ಸೀತಮ್ಮನ ಗಂಡ ಇವಳ ಕಾಟ ತಡಿಯೊಕ್ಕೆ ಆಗ್ದೆ areaದ water  tankಗೆ ಬಿದ್ದು ಸತ್ತನಂತೆ, ಒಂದು ವಾರ ಯಾರ್ಗು ನೀರ್ ಇಲ್ಲದ ಹಾಗೆ ಮಾಡಿದ್ದ ಪುಣ್ಯಾತ್ಮ.
ಇನ್ನು ಸೀತಮ್ಮನ್ನೊರ ಸೊಸೆ, ಯಾರ್ಯಾದ್ರೊ ಪಕ್ಕದ ಮನೆಯವರು ಬೆಂಕಿ ಪೋಟ್ಣ ಕೆಳಿದ್ರೆ, " ನಮ್ಮ ಅತ್ತೆ ಕರ್ಕೊಂಡು ಹೋಗಿ, ಒಂದು ಸಲ ಬೆಂಕಿ ಇಟ್ರೆ ತಿಂಗಳಗಟ್ಲೆ ಉರಿಯೊತ್ತೆ" ಅಂತಿದ್ಲು.

ನಾಯಿಗೆ , ಮೊಮ್ಮಗ ಅಚ್ಯುತ "ರಂಗ" ಅಂತ ಹೆಸ್ರು ಇಟ್ಟ . ಈ ಕಡೆ ಜಾವಿದ್ ಸಾಹೆಬ್ರು "ಬಿಲ್ಲಾ" ಅಂತ ಕರಿತಾಇದ್ರು.
ಅಚ್ಯುತ ಪಕ್ಕ ನರಸಿಂಹರಾಜು, ಒಂದು ದಿನ ರಂಗನಿಗೆ ಚನ್ನಾಗಿ ಸೊಫ್ ಹಚ್ಚಿ ಸ್ನಾನ ಮಾಡಿಸ್ತಿದ್ದ.

ಸೀತಮ್ಮ: ಲೋ ಪೆದ್ದು ಮುಂಡೆದೆ ಎನೊ ಮಾಡ್ತಾಇದ್ಯ?
ಅಚ್ಯುತ : ಅಜ್ಜಿ ಸ್ನಾನಾ ಮಾಡಸ್ತಾಇದ್ದಿನಿ, ರಂಗನಿಗೆ.
ಸೀತಮ್ಮ: ಈ ಅನಿಷ್ಟ ಸ್ನಾನಾ ಮಾಡಿ ಯಾವ್ ಮಠಕ್ಕೆ ಹೋಗ್ಬೇಕೊ?
ಅಚ್ಯುತ: ಅಜ್ಜಿ ! ರಂಗ ಕರಿ ಇದ್ದಾನೆ ಅಲ್ವ ? ಅವನನ್ನ ಬಿಳೀ ಮಾಡೊಣ ಅಂತ.
ಸೀತಮ್ಮ: ಕರಿ ನಾಯಿನ ಬಿಳೀ ಮಾಡೊಕ್ಕೆ ಅಗೊತ್ತೆನೊ ಪ್ರಾರಬ್ಧ?
ಅಚ್ಯುತ: ಯಾಕೆ ಅಗೊಲ್ಲ! Michael Jackson ಅಗ್ಲಿಲ್ವಾ.

ಹೀಗೆ ದಿನಗಳು ಕಳೆದವು, ಬಿಲ್ಲಾ ರಂಗ ಅವರವರ ಮನೇಲಿ ಬೆಳೆದು ದೊಡ್ದವಾದ್ವು.
ರಂಗ ಬಡಕಲಾಗಿ ಬೆಳೆದ , ಬಿಲ್ಲಾ ಬಲಿಷ್ಟವಾಗಿ. ಒಂದು ದಿನ ಜಾವಿದ್ ಅನಂತನ ಮನೆ ಮುಂದೆ ಬಿಲ್ಲನ ಕರ್ಕೊಂಡು walking ಹೂಗ್ತಾಇದ್ರು.
ಜಾವಿದ್: ಅಂತೂ ಎನ್ ಆರಾಮ?
ಅನಂತು: ಸಾಹೆಬ್ರೆ, ಅರಾಮ್ ಎನ್ ಬಿಲ್ಲಾ ಕರ್ಕೊಂಡು walking ಹೊರ್ಟ್ರಾ?
ಜಾವಿದ್:ಹೌದು ! ನಿಮ್ಮ ತಾಯಿ ನಾಯಿ ಜ್ಯೊತೆ, ಪರವಾಗಿಲ್ಲಾ?
ಅನಂತು:ಇಲ್ಲಾ ಸಾಹೆಬ್ರೆ, ನಮ್ಮ ಅಮ್ಮನಿಯೆ ಸ್ವಲ್ಪಾನು ಇಷ್ಟ ಇಲ್ಲಾ! ನಿಮ್ಮ ತಾಯಿಗೆ?
ಜಾವಿದ್:ಅದು ಏಕೆ ಹೇಲ್ಲಿ, ನಮ್ಮದು ಅಮ್ಮಿ ಇದ್ಯೆಲ್ಲಾ, ಬಿಲ್ಲಾಅವರನ್ನ ನೋಡಿದ್ರೆ ತುಂಬಾ ಇಷ್ಟ, ಇವರಿಗು ಅಷ್ಟೆ.
         ಇವರು ಬಂದಿ ನಮ್ಮ ಅಮ್ಮಿ ಇದ್ಯೆಲ್ಲಾ ಅದ್ರ ಮೇಲೆ ಎಗರಿ ಮೈಎಲ್ಲಾ ನೆಕ್ಕತಾರೆ , ಅದಿಕ್ಕು ಇಷ್ಟ ಇವರಿಗೂ ಇಷ್ಟ.
        ರಂಗ ಅವರು ಇಲ್ಲಾ? (ಅಂತ ಹೆಳ್ತಿದ್ದಹಾಗೆ, ರಂಗ ಗೊಡೆ ಹಿಂದೆ ಹೊಗಿ ಅವಿತು ಕೊಂಡ್ತಾನೆ, ಅವಮಾನದಿಂದ.)
  
ರಂಗ ಹೇಗಾದ್ರು ಮಾಡಿ ಬಿಲ್ಲನ್ನ meet ಮಾಡ್ಬೆಕು ಅಂತ ಜಾವಿದ್ ಮನೆ ಹತ್ರ ’ನಾಯಿ’ ತರಹ ಅಲಿತಾನೆ,ಇದನ್ನ ಬಿಲ್ಲಾ ನೊಡಿ ಬೊವ್ ಬೊವ್ ಅಂತ.

   ಬಿಲ್ಲಾ: ಕೊನ್ರೆ ಭೋಸು.....ಕೆ, ಘರ್ಕಾ ಸಾಮ್ನಾ ಚಕ್ಕರ್ದಾಲ್ಕು ಜಾರಾಯ್?
   ರಂಗ: ಅಣ್ಣ ! ನಾನು ರಂಗ ,ನಿನ್ನ ತಮ್ಮ.
   ಬಿಲ್ಲಾ:ಏನೊ ರಂಗ ನೀನಾ! ಒಳ್ಳೆ ’ನಾಯಿ’ ತರಹ ಆಗಿದ್ದಿಯಲ್ಲೊ ?
   ರಂಗ: ಹೌದು ! ನೀನು ತೋಳ ತರಹ ಇದ್ದಿಯ !
   ಬಿಲ್ಲಾ: ಠೀಕ್ ವಖ್ತ್ ಪರ್ ಖಾನ ನೆಹಿ ಖಾತಾ ಕ್ಯಾ?
   ರಂಗ: ಊಟಾನೆ ಇಲ್ಲಾ ಅಂದ್ರೆ ಇನ್ನು ಎನ್ ವಖ್ತ್, ಸುಡುಗಾಡು.
   ಬಿಲ್ಲಾ: ಭಾಯ್ ಜಾನ್ ! ಎನ್ ಸಮಾಚಾರ ಹೇಳು.
   ರಂಗ ಅಳುತ್ತ ತನ್ನ ಗೋಳು ಹೇಳೊಕ್ಕೆ ಶುರುಮಾಡ್ತಾನೆ.
   ರ‍ಂಗ: ದೇವ್ರು ನನಗೆ ನಾಯಿ ಆಗ್ತಿಯೊ ಮಂತ್ರಿ ಆಗ್ತಿಯೊ ಅಂತ choice ಕೊಟ್ಟಿದ್ದ, ನಾನು ನಾಯಿ ಜನ್ಮ ಒಳ್ಳೆದು ಅಂತ
   ಅಯ್ಕೆ ಮಾಡಿದ್ದು ತಪ್ಪಯಿತು. ಅ ದರಿದ್ರ ಮನೇಲಿ, ನಾಯಿ ಅನ್ನೋ ಗೌರವ ಇಲ್ಲ, ಕತ್ತೆ ತರಹ ದುಡಿಸ್ಕೊತಾರೆ. ಯಾವಾಗ್ಲು chain ಕಟ್ಟಿರ್ತಾರೆ, ಸ್ವಲ್ಪ ಅಲ್ಲಿ ಇಲ್ಲಿ ಓಡಾಡಿದ್ರೆ ದೊಣ್ಣೆಲಿ ಹೊಡಿತಾರೆ. ಬರಿ ಸಾರು, ಹುಳಿ ತಿಂದು ತಿಂದು ಬೇಜಾರಾಗಿದೆ. ಅದು ಹಳಿಸಿದ್ದು, ರುಚಿಯಾಗೆನೊ ಇರೊತ್ತೆ, ಎಷ್ಟು ತಿನ್ನೊದ್ದು? ಮನೇಲಿ ತಿಥಿ ಆದ್ರೆ ವಡೆ ಪಯ್ಸ ಸಿಗೊತ್ತೆ ಅದು ವರುಷಕ್ಕೆ ಒನ್ದುಸಲಿ, ಅದು ಅ ಮನೇಲಿ ಒಬ್ನೆ ಸತ್ತಿರೊದ್ರಿಂದ.ಇನ್ನ ಯಾವ್ದಾದ್ರೊ ಹೆಣಾ ಬೀಳತ್ತ ಅಂತ ಕಾಯ್ತಾಇದ್ದಿನಿ, ಯಾವ್ದು ಇನ್ನಾ ಬಿಳ್ತಾಇಲ್ಲಾ. ಬಂದ್ ಹೊಸುತ್ರಲ್ಲಿ ಸತ್ತ ಯಜಾಮನನ ಪಿಂಡನಾ ಉಂಡೆ ಅಂತ ಬಾಯ್ ಹಾಕ್ಕಿದಿಕ್ಕೆ ಬಾಂಡಳೆ ತೊಗೊಂಡು ಇಕ್ಕಿದ್ಲು ಆ ಮುದುಕಿ.ತಿಂಗಳಿಗೆ 2 ಸಲ ಉಪವಾಸ, ಆ ಮುಂಡೆವು ತಿನ್ನೊಲ್ಲ ನಮ್ಗು ಹಾಕೊಲ್ಲಾ.ಇನ್ನು ಯಾವುದೋ ತಿಂಗಳು ತರಕಾರಿ ತಿನ್ನೊಲ್ವಂತೆ, ಬರಿ ಮೆಣಸಿನ ಸಾರು ಮಾಡಿ ಮಾಡಿ ಸಾಯ್ತಾರೆ ! ಅದನ್ನ ತಿಂದ್ರೆ ಉರಿ, ಕೂರಕ್ಕೆ ಅಗೊಲ್ಲ ನಿಲ್ಲಕ್ಕೆ ಅಗೊಲ್ಲ ಇನ್ನು ಹೊಗ್ಬೆಕಾದ್ರೆ ಪ್ರಾಣ ಸಂಕಟ. ಇನ್ನು ಚಳಿಗಾಲದಲ್ಲಿ ಮನೇ ಕಾಯೊಲ್ಲ ಮಲ್ಗಿಬಿಡುತ್ತೇನೆ ಅಂತ, ನಾನು ಮಲ್ಗೊ ಗೊಣಿ ಮೇಲೆ ಅ ದರಿದ್ರ ಮುದುಕಿ ನೀರು ಸುರಿದು ಬಿಡ್ತಾಳೆ. ಮಠಕ್ಕೆ ಹೋಗೊ ಮುದುಕೀರ್ದು ಒಂದು ಗುಂಪು ಇದೆ, ಅವರ ಮನೇಲಿ ಎನಾದ್ರು ಹಳ್ಸಿದ್ದು ಇದ್ರೆ "ಸೀತಮ್ಮನ ಮನೆ ನಾಯಿ ತಿನ್ನತ್ತೆ, ಬಿಸಾಕ್ ಬೇಡಿ ಅಂತ ಹೇಳ್ತವೆ, ಕಳ್ ಮುಂಡೇರು!"

  ಬಿಲ್ಲಾ: ನಮ್ಮ ಮನೇಲಿ, ಮಸ್ತ್ ಮಟನ್ ಪುಲ್ಲಾವ್, bone less chicken ಬಿರ್ಯಾನಿ,ಶೇರ್ವ ,Goat soup ವಾರಕ್ಕೆ  ಇದ್ದೆ ಇರೊತ್ತೆ, ವಷ೯ಕ್ಕೆ ಒಂದು time ಉಪವಾಸ ಅದು ಸಾಯಂಕಾಲ್ ಗಂಟ.
  ರಂಗ: (ಜೊಲ್ಲು ಸುರಿಸುತ್ತಾ) ! ಅದಿಕ್ಕೆ ನೀನು ನೋಡೊಕ್ಕೆ mutton shop ಮುಂದೆ ಇರೊ ’ನಾಯಿ’ ತರ ಇದ್ದಿಯ್ಯ, ನನಿಗೆ ನೀನು ಎನಾದ್ರು ಸಹಾಯ ಮಾಡು.
  ಬಿಲ್ಲಾ: ನಿನ್ನ ಕಥೆ ಕೇಳಿ ನನ್ಗೆ ತುಂಬಾನೆ ಬೇಝಾರ್ ಆಯ್ತು, ಒಂದು ಸಹಾಯಾ ಮಾಡ್ತೀನಿ.
  ರಂಗನ ಆಶ್ಚಯ೯ದಿಂದ ನೋಡ್ತಾನೆ !
 ಬಿಲ್ಲಾ: ಬಸ್ ಎಕಿಚ್ ದಿನ್ ನೀನು ನಮ್ಮ ಮನೇಲಿ ’ಬಿಲ್ಲಾ’ ಆಗ್ಬಿಡು, ನಾನು ನಿಮ್ಮ ಮನೇಗೆ ಹೂಗಿ ’ರಂಗ’ ಆಗ್ತೀನಿ.
 ರಂಗ: ನಿನ್ ರುಣ ಈ ಜನ್ಮದಲ್ಲಿ ಮರೆಯೊಲ್ಲ ! ತುಂಬಾ thanks.
ಬಿಲ್ಲಾ: ಬಸ್ ಎಕಿಚ್ ದಿನ್, ನಾಳೆ ನೀನು ಈ ಮನೆ ಬಿಟ್ಟು ಹೊಗ್ತಾರ್ಬೇಕು !

ರಂಗ ಬಿಲ್ಲಾ, ತಮ್ಮ ತಮ್ಮ ಮನೆಯ ಸುಕ್ಷ್ಮಗಳನ್ನು ಪರಸ್ಪರ ಹಂಚಿ ಕೊಳ್ತಾರೆ.ಬಿಲ್ಲಾ ರಂಗನ ಮನೆಗೆ ಕಾಲ್ ಇಡ್ತಿದ್ದ ಹಾಗೆ ..
ಸೀತಮ್ಮ: ದರಿದ್ರ ಮುಂಡೆದು ಬೀದ್ ಬೀದಿ ಸುತ್ತಿ ಅವರಿವರ ಮನೆ ಪಿಂಡ ತಿಂದು ಹೆಗ್ಣ ತರಾ ಇರೊದು ನೋಡು (ಅಂತ ಹೇಳಿ, ಕಟ್ ಹಾಕ್ತಾಳೆ)

ಇತ್ತ, ರಂಗ ಸಣ್ಣ ಇರೊದು ನೋಡಿ, ಜಾವಿದ್ ಬೆಜಾರ್ ಮಾಡ್ಕೊಂಡು ಅ ದಿನ ಪೂರ್ತಿ ಮಾಂಸ ತಿನ್ನಿಸುತ್ತಾನೆ.ರಂಗನ ಹೊರಡುವ ಸಮಯ ಬರೊತ್ತೆ, ಬಿಲ್ಲನಿಗೆ ಕಾಯುತ್ತನೆ ಅದ್ರೆ ಬಿಲ್ಲ ಬರೋದೆ ಇಲ್ಲ.

ಹೀಗೆ ಒಂದು ವಾರ ಕಳಯೊತ್ತೆ, ಬಿಲ್ಲಾ ಹೇಗೊ ಮಾಡಿ ರಂಗನ ಮನೆಯಿಂದ ತಪ್ಪಿಸಿಕೊಂಡು, ಅವನ ಮನೆ ಮುಂದೆ ಬಂದು ನಿಲ್ಲುತ್ತಾನೆ. ಆಶ್ಚಯ೯! ರಂಗ ಕೇವಲ ಒಂದು ವಾರಕ್ಕೆ ಬಲಿಷ್ಠವಾಗಿರ್ತಾನೆ.ಬಿಲ್ಲಾನ ನೋಡಿದ ಕೂಡ್ಲೆ, ಬೊವ್ ಬೊವ್ ಅನ್ತಾನೆ.

ಬಿಲ್ಲಾ: ಗುರು ! ನಿಮ್ಮ ಮನೆ ಸಹವಾಸ ಸಾಕಾಯ್ತು, ನೀನು ಹೊರಡು....
ರಂಗ: ತಾವು ಯಾರೊ ! ಗೊತ್ತಾಗ್ಲಿಲ್ಲ.  ಬೇಗ ಹೋಗಿ ಮನೆ ಸೆರ್ಕೊಳ್ಳಿ, ನಾಯಿ van ಈ ಕಡೆನೆ ಹೋದಾಗೆ ಆಯ್ತು(ಡಾ.ರಾಜ್ ತರಹ).
ಬಿಲ್ಲಾ: ನಿನ್ ***@##$%&#*, ನಾನು ಯಾರು ಅಂತ ಕೆಳ್ತೀಯಾ, ಇರು ಮಾಡ್ತೀನಿ.
ಅಂತಿದ್ದಹಾಗೆ ರಂಗ ಜ್ಯೊರಾಗಿ ಬೊವ್ ಬೊವ್ ಅಂತಾನೆ, ಜಾವಿದ್ ಇದನ್ನ ಕೇಳಿ ಕಲ್ಲು ಎತ್ತುಕೊಂಡು ಬಿಲ್ಲನಿಗೆ ಹೋಡೆದು ಓಡಿಸುತ್ತಾನೆ.
ಬಿಲ್ಲಾ ಜ್ಯೋರಾಗಿ ರೊಧಿಸುತ್ತಾ, ರಂಗನಿಗೆ..
ಬಿಲ್ಲಾ:ಕಡೆಗು ತೊರಿಸ್ದ್ಯಲ್ಲಾ ’ನಾಯಿ’ ಬುದ್ದಿ.

ಸೊಳ್ಳೆ ಸಂಸಾರ

ಬೆಂಗಳೂರಿನ M . G .ರೋಡ್ ಬಹುಮಹಡಿಯ  ಕಟ್ಟಡದ ಮುಂದೆ ಇರೋ ಕಂಬದ ಮೇಲೆ ಸುಬ್ಬುಲಕ್ಷ್ಮಿ ,ಸಾವಿತ್ರಿ ,ಸುಲೋಚನ ,ಕಮಲಾಬಾಯಿ ಎಲ್ಲಾ ಕೂತಿರುತ್ತಾರೆ.

ಸುಲೋಚನ: ಅಮ್ಮ ನಾವೆಲ್ಲ ಇಲ್ಲಿ ಏಕೆ ಕೂತಿದ್ದಿವೇ ?.
ಸಾವಿತ್ರಿ: ಪುಟ್ಟ ,ಇನ್ ಏನ್ ಫಿಲಂ ಶುರುವಾಗೊತ್ತೆ ಆಮೇಲೆ ಎಲ್ಲಾ ಒಳಗೆ ಹೋಗೋಣ ! ಆಯ್ತಾ
ಸುಲೋಚನ: ಅಮ್ಮ! ಇದು ಸಿನಿಮಾ ಥಿಯೇಟ್ರ ?
ಸುಬ್ಬುಲಕ್ಷ್ಮಿ: ಹೌದು ! Symphony  talkies (ಎನ್ನುತಿದ್ದಂತೆ , ಟಪಾರ್! ಅಂತ ಸುಬ್ಬುಲಕ್ಷ್ಮಿ ತಲೆಗೆ ಸಾವಿತ್ರಿ ಬೀಸ್ತಾಳೆ .
                 ಸಾವಿತ್ರಿ ಯೆಲ್ಲರ್ಗಿನ್ನ ದೊಡ್ಡವಳು)
ಸಾವಿತ್ರಿ: ಎಷ್ಟು ಸಲಿ ಹೇಳಲಿಲ್ಲ .. ಈಗ ಇದು ಶಂಕರ್ನಾಗ್ ಚಿತ್ರಮಂದಿರ ಅಂತ, ಆಗಲೇ ಹೆಸರಿಟ್ಟು ತುಂಬಾ ದಿನ ಆಗಿದೆ. 
            ನನ್ಗೆ ಕನ್ನಡ ಬಿಟ್ಟು ಬೇರೆ ಹೆಸರು ಹೇಳಿದ್ರೆ ತುಂಬಾ ಕೋಪ ಬರೋತ್ತೆ.
ಕಮಲಾಬಾಯಿ: ಯಾವಾಗಿಂದ ಈ ಬುದ್ಧಿ ಬಂದಿರೋದು ? (ವ್ಯಂಗ್ಯವಾಗಿ ).
ಸಾವಿತ್ರಿ: ಈ ರೋಡ್ ಎಂಡ್ಅಲ್ಲಿ , ಅದೇ ತಾತಪ್ಪರೋ statue ಇದ್ಯಲ್ಲ ! ಅದ್ರ ಕಳಗೆ ತುಂಬಾ ಜನ ಕೆಂಪು ಹಳದಿ
            ಪಟ್ಟೇ,ಬಟ್ಟೆ ಕಟ್ಕೊಂದಿರ್ತಾರಲ್ಲ ?  ಅವರ ರಕ್ತ ಹೀರಿದಮೇಲೆ ನನ್ಗೆ ಈ ಬುದ್ದಿ.
ಕಮಲಾಬಾಯಿ:ಓಹೋ ... ಖನ್ನಡ ಓರಾಟಗಾರರ ರಕ್ತ , ಬರೀ ಎಣ್ಣೆ ಮಿಕ್ಷು ! ಅದು ಹೇಗೆ ಹೀರ್ತಿಯೋಮ್ಮ !
ಸಾವಿತ್ರಿ:ಏನೆ ಆಗ್ಲಿ ಬೆಂಗಳೂರ್ನಲ್ಲಿ ಅದರಲ್ಲೂ ಈ ರೋಡ್ ನಲ್ಲಿ ಸ್ವಲ್ಪ ಕನ್ನಡ ಇರೋದೇ ಅವರಿಂದ.
ಸುಲೋಚನ: ಅಮ್ಮ ಈ building ....
ಸುಬ್ಬುಲಕ್ಷ್ಮಿ: Utility ಬಿಲ್ಡಿಂಗ್ ....(ದರ್ಪದಿಂದ)
ಸುಲೋಚನ:  ಅಮ್ಮ ಅಮ್ಮ ನಾವು ಅದ್ರು ಮೇಲೆ ಹೋಗೋಣ ಫುಲ್ ಬೆಂಗಳೂರು ಕಾಣತ್ತೆ !
ಸುಬ್ಬುಲಕ್ಷ್ಮಿ: ನಮ್ಮ ಕೆಪಾಕಿಟಿ ಇರೋದೇ upto 3 floorsu  , ಅದಕ್ಕಿನ ಮೇಲೆ Not Pazibal (ಸಿದ್ರಾಮಪ್ಪನ ಸ್ಟೈಲ್).
ಕಮಲಾಬಾಯಿ:ಲಿಫ್ಟ್ ನಲ್ಲಿ ಹೋಗಬಹುದು ಯಾರಿಗೂ ಗೊತ್ತಾಗೊಲ್ಲ , ಲಿಫ್ಟ್ ನ ಲೈಟ್ ಯಾವಾಗ ಸಾಯ್ತೀನೋ ಅಂತ
                   ಉರಿತಾಯಿದೆ.
ಸಾವಿತ್ರಿ:ಕಡೇ ಅಂತಸ್ತಲ್ಲಿ ಪೋಲಿಸ್ ಕಂಟ್ರೋಲ್ ರೂಂ ಇದೆ ಬೇಕಾದ್ರೆ ಹೋಗೋಣ !
ಕಮಲಾಬಾಯಿ:ಯಾಕೆ ಸಾಯಕ್ಕಾ ?  ಮದ್ಲೆ ಅಲ್ಲಿ ಕೆಲಸ ಇಲ್ಲ .ಇನ್ನು ನಾವ್ ಹೋದರೆ ......
ಎಲ್ಲರು: ಸೊಳ್ಳೆ ಹೊಡಿತಾರೆ !! (ಅಂತ ಜ್ಯೋರಾಗಿ ನಗುತ್ತಾರೆ )
ಸುಲೋಚನ: ಅಮ್ಮ ! ಈ ಥಿಯೇಟರ್ ಗೆ ಏಕೆ ಬರಬೇಕು ಬೇರೆಕಡೆ ಹೋಗೋಕ್ಕೆ ಅಗೊಲ್ಲ್ವ ?
ಸುಬ್ಬುಲಕ್ಷ್ಮಿ:  ಪೆದ್ದು ಮುಂಡೇದೆ ! ಇನ್ ಏನ್ ಶೋ ಟೈಮ್ ಎಲ್ಲಾ ಒಳಗಡೆ ಹೋಗಿ ಸೆಟಲ್ ಆಗ್ತಾರೆ , ಕತ್ಲೇಲಿ attack
                  ಮಾಡಿದ್ರೆ ಯಾರಿಗೂ ನಾವು ಸಿಕ್ಕಾಕೊಳೋಲ್ಲ.
ಸಾವಿತ್ರಿ:ಇಲ್ಲಿ ತೋರ್ಸೋದೆ ಇಂಗ್ಲಿಷ್ ಫಿಲಂಸ್ , ಅದ್ದಿಕ್ಕೆ ನಾವು ಇಲ್ಲಿ ಬಂದಿರೋದು.
ಕಮಲಾಬಾಯಿ: ಅದಪ್ಪ ಕನ್ನಡ ಪ್ರೇಮ ! ನೀನು ನಿಜವಾಗಲು ಕನ್ನಡತಿ ಆದ್ರೆ ಉಮಾ ಥಿಯೇಟರ್ ಗೋ , ಪ್ರಸನ್ನ ಪ್ರಮೋದ್
                    ಥಿಯೇಟರ್  ಗೋ ಹೋಗ್ಬೇಕು !
ಸಾವಿತ್ರಿ: ಯಾಕೆ ! ಬಾಯಿಗೆ ಮಣ್ಣ ಹಾಕೊಳಕ್ಕ ? ಅಲ್ವೇ... ಅಲ್ಲಿ ತೋರ್ಸೋದು ಕನ್ನಡ ಫಿಲ್ಮ್, ಯಾವ ನನ್ಮಕ್ಕಳು ಬರ್ತಾರೆ ?
             ಜನಾನೇ ಇರೋಲ್ಲ , ನಾವೇನ್ ಉಪಾಸ ಸಾಯಬೇಕ ? ಈಗಂತೂ ಮಚ್ಚು ಲಾಂಗು ಕಥೆಗಳು. ಆ ಸಿನಿಮಾ
             ನೋಡಿದ್ರೆ ನಮಗೆ ಭಯ ಅಗೊತ್ತೆ. ನಾವು ರಕ್ತ ಕುಡಿಬೇಕಾದ್ರೆ ಕಲರ್ನೋಡ್ತೀವ ?
             ಸ್ಕ್ರೀನ್ ಮೇಲೆ ಬರೀ ರಕ್ತಾನೆ, ಅದು ಕೆಂಪಾಗಿರೋದು ನೋಡಿದ್ರೆ ಊಟನೆ ಸೇರಲ್ಲ ಥೂ !! ವ್ಯಾ ......... ಅ
             ಥಿಯೇಟರ್ ನಲ್ಲಿ ಲಾಸ್ಟ್ ಫಿಲ್ಮ್ ಅಂದ್ರೆ ಮುಂಗಾರು ಮಳೆ. ಫಿಲ್ಮು ೧೦೦ ಡೇಸ್, ನಮಗೆ ಅದು ಗೋಲ್ಡನ್ ಡೇಸ್.

ಆ ಸಮಯಕ್ಕೆ 'ಕೃಷ್ಣವೇಣಿ' ಹಾರಡ್ಕೊಂಡು ಬರ್ತಾಳೆ.

ಕೃಷ್ಣವೇಣಿ: ಎನ್ರೆಮ್ಮ ! ಎಲ್ಲಾ ಇಲ್ ಸೆಟಲ್ ಆಗಿದ್ದಿರ ?
ಕಮಲಾಬಾಯಿ: ಏನೇ ತ್ರಿಪುರ ಸುಂದರಿ ! ಎಲ್ಲಿಂದ ಸವಾರಿ.
ಕೃಷ್ಣವೇಣಿ: ಇವತ್ತು ! really Bad day , ನೈಸ್ ರೋಡ್ ಕಡೇ ಹೋಗಿದ್ದೆ , ಅಲ್ಲಿ ತುಂಬಾ ಜನ ಸೇರಿದ್ರು ಒಳ್ಳೆ deal
               ಅನ್ನ್ಕೊಂಡು ನುಗ್ದೆ . ಜನ ತುಂಬಾ ಕೂಗಾಡತಾಇದ್ರು .ಸೀದಾ ಮುಂದೆ ನಿಂತಿದ್ದ ವ್ಯಕ್ಕ್ತಿಗೆ ಚುಚ್ಚಿದೆ . ನನ್ಮಗಂದು
               ನನ್ನ taste buds ಎಲ್ಲಾ ಎಕ್ಕುಟೋಯಿತು. blood aaa ಅದು ಬರೀ ವಿಷ , ಎಲ್ಲಾ medicine ಮಿಶ್ರಿತ and
               ಸಪ್ಪೆ,  ಆ ಮನುಷ್ಯನು ಸಪ್ಪೆನೇ.ನನ್ನ ಕೊಂಡಿ bend and blunt ಆಗೊಯಿತು. ಸೀದಾ ಸಿಟಿ ಮಾರ್ಕೆಟ್ ಗೆ
               ಹೋದೆ ನಮ್ ಅಮ್ಜದ್ ಅಲಿ ಮುನ್ನವರ್ ಪಾಷ ಹತ್ರ.
ಸುಲೋಚನ: ಅಮ್ಜದ್ ಅಲಿ ಮುನ್ನವರ್ ಪಾಷ ?(ಆಶ್ಚರ್ಯದಿಂದ )
ಕಮಲಾಬಾಯಿ:ಅದೇ ಸಾಣೆ ಹಿಡಿಯೋನು ! ನಮ್ಮವನೇ......  ಗಂಡಸೊಳ್ಳೆ
ಕೃಷ್ಣವೇಣಿ: ಅವನ ಹತ್ರ ಕೊಂಡಿ ಶಾರ್ಪ್ ಮಾಡಿಸ್ಕೊಂಡೆ ! ಅವನು ಹೇಳ್ದ Session ಶುರುವಾಗಿದೆ ತುಂಬಾ ಜನ ಇರ್ತಾರೆ
               ಸೀದಾ ವಿಧಾನ ಸೌಧಕ್ಕೆ ಹೋಗು ಅಂದ. ನಾನ್ ಸೀದಾ ಅಲ್ಲಿಂದಾನೆ ಬರ್ತಿರೋದು.
ಸುಬ್ಬುಲಕ್ಷ್ಮಿ: ಏನ್ ಒಳ್ಳೆ ಡೀಲಾ !
ಕೃಷ್ಣವೇಣಿ: ಅಯ್ಯೋ ! ಒಳಗೆ ಹೋದೆ, ಯಾವೋನೋ ಒಬ್ಬ ದೇವ್ರು ವಿಗ್ರಹ ತರಹ ಕೂತಿದ್ದ , ಪೂಜಾರಿ ತರಹ ಒಬ್ಬ ಎದ್ದು
               ನಿಂತು ಮಾತಾಡ್ತಿದ್ದ . ಇನ್ ಎಲ್ಲರೂ ನಿದ್ದೆ ಮಾಡ್ತಿದ್ರು. ಒಬ್ಬ ಶಿಮೊಗ್ಗ ದವನಂತೆ, ನಾನು ಹೆಣ್ಣು ಸೊಳ್ಳೆ ಅಂತ
               ಗೊತ್ತಾದ ಮೇಲೆ ನನ್ನ ಮೇಲೆ ಅತ್ಯಾಚಾರ ಮಾಡೋಕ್ಕೆ ಪ್ರಯತ್ನ ಪಟ್ಟ. ಅವನಿಂದ ತಪ್ಪಿಸ್ಕೊಂಡೆ.
ಸುಬ್ಬುಲಕ್ಷ್ಮಿ: ಮಿಕ್ಕಿದವರ ರಕ್ತ ಹೀರ್ದೆತಾನೆ ?
ಕೃಷ್ಣವೇಣಿ: ಏನ್ ಸುಡುಗಾಡು , ಅ ಬಡ್ಡಿ ಮಕ್ಳುದು ಚರ್ಮನಾ ! ಟಾರ್ಪಾಲ್ ಟಾರ್ಪಾಲ್,ಎಮ್ಮೆಚರ್ಮಕ್ಕಿನ್ನಾ ಗಟ್ಟಿ.
              ಮತ್ತೆ ನಾನು ಮುನ್ನವರ್ ಪಾಷ ನ ಹತ್ರ ಹೋಗ್ಬೇಕು.
ಸುಲೋಚನ:
ಅಮ್ಮ ಅಣ್ಣನ ವಿಧಾನ ಸೌಧಕ್ಕೆ ಕಳ್ಸಿದ್ರೆ ?
ಸಾವಿತ್ರಿ:ಪುಟ್ಟ ! ರಕ್ತ ಹೀರೋದು ಬರಿ ಹೆಂಗ್ಸ್ರುದು ಕೆಲ್ಸ, ಗಂಡ್ಸ್ರುದಲ್ಲ.

ಶೋ ಟೈಮ್ ಅಯಿತು ಎಲ್ಲಾರು ಥಿಯೇಟರ್ ಒಳಗೆ ನುಗ್ಗುತಾರೆ.

ಹಾಲಪ್ಪನ ಅವಾಂತರ

ಬೆಳ್ಳಂ ಬೆಳಗ್ಗೆ  ಶಿವಮೊಗ್ಗ ಪಟ್ಟಣದಲ್ಲಿ ಪೇಪರ್ ಹಾಕೋ  ಹುಡ್ಗ ಕಿಟಿಕಿ ಇಂದ "ಸಾರ್ ಗೊತ್ತಾ ನ್ಯೂಸ್ , ಹಾಲಪ್ಪ ಹಲ್ಕಾ ಕೆಲಸ ಮಾಡಿ
ಕೊನೆಗೂ ಸಿಗಾಗ್ಕೊಂಡ " ಅಂತ ಕೂಗಿ ಹೇಳ್ದ.
ಯಾರೋ ಕಪಾಳಕ್ಕೆ ಹೊಡೆದು ಎಬ್ಬಿಸಿದಂಗೆ ಆಯಿತು "ಕೂಳಿನ ಬೇಟೆ " ಸಂಪಾದಕ,reporter and reader ಕಣ್ಣಪನಿಗೆ.
ಸದ್ಯ ಪೇಪರ್ ಸುದ್ದಿ ಇನ್ನು ಆಗಿರಲ್ಲಿಲ್ಲ. ಡೆಕ್ಕನ್ ,times ನಲ್ಲಿ ಬರೋಕ್ಕೆ ಮುಂಚೆ ತನ್ನ ಪತ್ರಿಕೆ ನಲ್ಲಿ ಬರಬೇಕು ಅಂತ  ಕಣ್ಣಿನ ಪಿಸ್ರು ತ್ಯಕೊಳದೆ  ಬಾಯನ್ನು ತೊಳಿದೆ, ಕ್ಯಾಮೆರಾ ಕತ್ತಿಗೆ, ಹೆಗಲಿಗೆ ಭುದ್ದಿಜೀವಿಗಳ ಬ್ಯಾಗ್ ಏರಿಸ್ಕೊಂಡು ಹೊರಟ. ದಾರಿ ಉದ್ದಕ್ಕೂ ಜನ ಮೂಗು ಮುಚ್ಕೊಂಡು ಕಣ್ಣಪನಿಂದ ದೂರ ಹೋಗ್ತಿದ್ರು,ಕೆಲವು ಹೆಂಗಸರು ಕಾರ್ಪೋರೇಶನ್ ಲಾರಿ ಬಂತು ಅಂತ  ಕಸ ಹಿಂಡ್ಕೊಂಡು ಹೊರಗೆ ಬಂದ್ರು.
ಕಣ್ಣಪ್ಪ ಬಾಯ್ತೊಳಿದಇದ್ರೆ ಯೆನಾಗೊತ್ತೆ ಅಂತ ಅಲ್ಲಿ ಜನಕ್ಕೆ ಅವತ್ತೇ ಗೊತ್ತಾಗಿದ್ದು .

ದಾರಿಲಿ ಬರಿ ಇದೆ ಸುದ್ದಿ , ಕಣ್ಣಪ ಪೋಲಿಸ್ ಸ್ಟೇಷನ್ ಇಷ್ಟೊತ್ತಿಗಾಗಲೇ ಬರಬೇಕಿತ್ತು ಇವತ್ತು ಯಾಕೋ ಇನ್ನು ದೂರ ದೂರ ಅನ್ಸ್ತಿದೆ  ಅಂತ
ಅನ್ನ್ಕೊಂಡ್ತಿದ್ದ. ಊರಿಗೆ ತುಂಬಾ ಬೇಕಾಗಿರೋ ಹೆಣ್ಣುಮಗಳು ಸು'ಶೀಲ' ದಾರೀಲಿ ಸಿಕ್ಕಿದಳು.ಕಣ್ಣಪ್ಪ ಬಹುಶ ಇವಳಿಗೆ ಹಾಲಪ್ಪನ ವಿಷಯ
ಗೊತ್ತಿರೊತ್ತೆ ಅಂತ ಕೇಳಿದ." ಹಾಲಪ್ಪನ ತಾವ ನನ್ನ ವ್ಯವಾರ ಏನ್ ಇಲ್ಲ ಸಾಮಿ" ಅಂತ ಸ್ಪಷ್ಟವಾಗಿ ಹೇಳಿದಳು.ಕಣ್ಣಪನಿಗೆ ಮುಂಚೆ ಇಂದಲೂ ಇವಳ ಬಗ್ಗೆ ಆಸಕ್ತಿ ಜಾಸ್ತಿ , ಇನ್ಯಾತಿಕ್ಕು ಅಲ್ಲ , ಟೌನ್ ನಲ್ಲಿ first AIDS ಕೇಸ್ ರಿಪೋರ್ಟ್ ಮಾಡೋ ಅಸೆ ಅದ್ದಿಕ್ಕೆ ಸು'ಶೀಲ'
ಫ್ಯಾಮಿಲಿ ಡಾಕ್ಟರಗೆ ಆಗಾಗ ಫೋನ್ ಮಾಡ್ತಿದ್ದ.

ಬೇತಾಳನ ಕಟ್ಟೇಲಿ ಇಬ್ರು ಹೆಂಗಸರು ಮಾತಾಡ ಇದ್ದರು, "ಅವತ್ತೇ ಹಾಲಪ್ಪ ಕದ್ದು ಮುಚ್ಚಿ  ಮಾಡೋ ಕೆಲಸ ನ ನಾನು ನೋಡಿದೆ , ಎಲ್ಲಾ ಹೆಣ್ಣು ಮಕ್ಕಳುಗೂ ಹೇಳ್ದೆ , ಯಾರು ನಂಬಲಿಲ್ಲ". ಓಹೋ ... ಏನೋ ಜ್ಯೋರಾಗೆ ನಡದಿದೆ ಅಂತ ಮನಸಿನಲ್ಲೇ ಖುಷಿ ಪಟ್ಕೊಂಡ ಕಣ್ಣಪ್ಪ.

ಅಂತು ಬಂತು ಪೋಲಿಸ್ ಸ್ಟೇಷನ್. ಹಾಲಪ್ಪನ ಕುಟುಂಬ ದವರು ಹೊರಗಡೆ ಅಳುತ್ತಿದ್ರು .

Inspector ಬುಲ್ಲಯ್ಯ ಮೀಸೆ ತಿರುವಿ ಬಾಯಿಗೆ ಬಂದಂತೆ ಹಾಲಪ್ಪನ ಸಂಬಂಧಿಗಳಿಗೆ ರೇಶನ ಕಾರ್ಡ್ ನಲ್ಲಿ ಇರೋರ್ ಹೆಸರೆಲ್ಲ ಹೇಳ್ತಾ ಬೈತಿದ್ದ
" ಅಮ್ಮ " ಅಕ್ಕ" ತಂಗಿ " ಹೀಗೆ .

ಕಣ್ಣಪ್ಪ , inspector ಯಾಕೋ ಶಾನೆ ಕೋಪದಲ್ಲಿ ಇದ್ದಾನೆ ಇವನ್ನ ಕೇಳೋದ್ ಬೇಡ ಅಂತ ಅನ್ನ್ಕೊಂಡ.  lockup ಕಿಟಕಿ ಸ್ಟೇಷನ್ ಹಿಂಬಾಗಕ್ಕೆ ಇತ್ತು , ಸಂಪಿಗೆ ಮರದ ರೆಂಬೆ  ಕಿಟಕಿ ಮುಂದೆ ಸಾಗಿತ್ತು. ಕಣ್ಣಪ್ಪ ಕಾಳಿದಾಸನ ತರಹ ಮರ ಹತ್ತಿ ರೆಂಬೆ ಮೇಲೆ ಕೂತ್ಕೊಂಡ. ಹಾಲಪ್ಪ ನ ನೋಡಿದ. "ಹಾಲಪ್ಪ ನಾನು ನಿಂಗೆ ಸಹಾಯ ಮಾಡ್ತೀನಿ" ಅಂತ ಹೇಳ್ದ ಆದ್ರೆ ನಡೆದ ಸಂಗತಿ ತಿಳಿಸು ಎಂದ.

ಹಾಲಪ್ಪನಿಗೆ ಈ ಪತ್ರಕರ್ತರು  ಬೇರೆಯವರ ಮನೆಗೆ ಬೆಂಕಿ ಬಿದ್ದರೆ ಅ ಬೆಂಕಿನಲ್ಲಿ ಬೀಡಿ ಹಚ್ಚಿಸಕೊಳ್ತಾರೆ ಅಂತ ಗೊತ್ತಿತ್ತು ಅದ್ರು ಕಣ್ಣಪ್ಪನಿಗೆ ಹೇಳತೊಡಗಿದ, "ಸರ್ ಇನ್ಮೇಲೆ ನಾನು ಹೀಗೆ ಮಾಡೋಲ್ಲ ನನ್ನ ಬಿಟ್ಬಿಡೋಕ್ಕೆ  ಹೇಳಿ ಸರ್ ! ನಾನು ಯಾವಾಗಲು ಮಾಡೋದೇ, ಆದ್ರೆ ಇವತ್ತು inspector ಹೆಂಡ್ತಿಅಂತ ಗೊತ್ತಿಲ್ಲದೇ ......."

ಕಣ್ಣಪ ಆಶ್ಚರ್ಯ ದಿಂದ "ಗೊತ್ತಿಲ್ಲದೇ ......" .

" ನಾನು ಹಾಲಿಗೆ ನೀರು ಬೆರ್ಸೋದನ್ನ ಅವರ ಹೆಂಡ್ತಿ ನೋಡಿ ಬಿಟ್ಟರು ಸರ್, ನನ್ನ ಬಿಡಿಸಿ ಸರ್ " ಅಂದ ಹಾಲಪ್ಪ .

 ಕಣ್ಣಪ್ಪ ಕೂತಿದ್ದ ಟೊಂಗೆ ಮುರಿತು, ಧಪ್ಪ್ ಅಂತ ಕಳಗೆ ಬಿದ್ದ . inspector ಬುಲ್ಲಯ್ಯ "ಅವನನ್ನ ಬಿಡಿಸೊಕ್ಕೆ ಈ ನನ್ ಮಗ ಬಂದವನೇ !! ತಳ್ರೋ ಒಳ್ಳಿಕ್ಕೆ "ಅಂದ.

ಹೈವೇ ನಲ್ಲಿ ಮಂತ್ರಿ ಮಹಾಶಯ

ಆಗತಾನೆ ಸಮಾರಂಭ ಉದ್ಘಾಟನೆ ಮಾಡಿ ಬೆಂಗಳೂರಿಗೆ ವಾಪಸ್ ಆಗುತ್ತಿದ ಮಂತ್ರಿಯೊಬ್ಬರು , High Way ಧಾಬದಲ್ಲಿ ಗಾಡಿ ನಿಲ್ಲಿಸೋಕ್ಕೆ Gunman ಗೆ ಹೇಳಿದ್ರು.

" ಲೇ ಇವನೇ, ಹೋಗಿ ಮಂತ್ರಿ ಬಂದವರೆ ಕುಡಿಯೋಕ್ಕೆ 'ಡ್ರಿಂಕ್ಸ್' ಬೇಕು ಅಂತ ಹೇಳು' , ಅಂದ ಮಂತ್ರಿ.
 "ಸರ್ ದುಡ್ಡು !!" ಅಂದ Gunman. "ಲೇ ಬೋ ....ಮಗನೆ , ನಿಂಗೆ gun ಕೊಟ್ಟಿರದು ಸರ್ಕಾರ ಯಾಕೆ ?, ಅದನ್ನೇ ತೋರ್ಸಿ ಡ್ರಿಂಕ್ಸ್ ಎತ್ಕೊಂಡು ಬಾ" ಅಂದ ಮಂತ್ರಿ.

Gunman, gun ತೋರ್ಸಿ, "ಲೇ ಅ rack ನಲ್ಲಿ ಇರೋ arrack ಕೊಡೊ , ಮಂತ್ರಿ ಬಂದವರೆ ಅವರ್ಗೆ ಡ್ರಿಂಕ್ಸ್ ಬೇಕಂತೆ".
ಅದಕ್ಕೆ ಮಾಲೀಕ "ಸರ್ ಅವರಿಗೆ ಒಳ್ಳೆ ಫಾರ್ಇನ್ ವ್ಹಿಸ್ಕೆಯ್ ಕೊಡ್ತೀನಿ" ಅಂದ.

Gunman "ಲೇ ಹೇಳದಷ್ಟು ಮಾಡೋ , ಅವರು ಕುಡಿಯೋದೆ arrack ಬೇರೆದು ಕೊಡಿದ್ರೆ ಕಿಕ್ಕ್ ಬರೋಲ್ಲಂತೆ, ಫಾರ್ಇನ್ ವ್ಹಿಸ್ಕೆಯ್ ಅಂದ್ಯಲ್ಲ ಅದನ್ನ ನಂಗು ,ಡ್ರೈವರ್ ಗೆ ಕೊಡು ನಾವು ಕುಡಿಯೋದೆ ಅದು" ಅಂದ.

ಮಂತ್ರಿಗಳು ಕುಡಿದು  ಅಲ್ಲಿಂದ ಮುಂದೆ ಪ್ರಯಾಣ ಮಾಡಿದ್ರು ,ಮಾರ್ಗ ಮಧ್ಯದಲ್ಲಿ " ಲೇ ಇವನೇ ನನ್ಗೆ ಸೂಸು ಬರ್ತಿದೆ ಗಾಡಿ ಇಲ್ಲೇ ನಿಲ್ಸು".

 ಡ್ರೈವರ್ " ಸರ್ ಇದು highway ಸರ್ ಇಲ್ಲಿ ನಿಲ್ಸಿದ್ರೆ ತಪ್ಪಾಗೊತ್ತೆ ". ಮಂತ್ರಿ " ಲೇ ನಾನು ಈ ರಾಜ್ಯದ ಮಂತ್ರಿ , ನಾನು ಎಲ್ಲಿ ಬೇಕಾದ್ರೂ ನಿಂತ್ಗೊತೀನಿ , ಹೆಂಗ್ಬೇಕಾದ್ರು ನಿಂತ್ಗೊತೀನಿ, ನೀನು ಗಾಡಿ ನಿಲ್ಸು" ಅಂದ.

 ಮಧ್ಯ ರಸ್ತೇಲಿ ಕಾರ್ ನಿಂತಿತು. ಡ್ರೈವರ್ "ಸರ್ ಇಲ್ ಬೇಡ ಅ ಸೈಡ್ಗೆ ಹೋಗಿ",ಅಂದ.
ಕುಡಿದ ಅಮಲ್ನಲ್ಲಿ ಮಂತ್ರಿ "ಲೇ ಇವನೇ ನಾನು ಸೂಸು ಮಾಡೋತಂಕ ಯಾವ ಗಾಡಿ ಪಾಸ್ ಆಗದಂತೆ ನೀನು gun ಹಿಡ್ಕೊಂಡು ನಿಂತ್ಕೋ ".

Gunman ಸರ್ಕಾರ ಕೊಟ್ಟ ತುಕ್ಕುಹಿಡಿದ ,ಕೇವಲ ಆಯುಧ ಪೂಜೆಗೆ ಬಳೆಸುವ gun ನನ್ನು ಹಿಡಿದು ನಿಂತ.

ಕತ್ತಲಲ್ಲಿ ಬೆಳಕು ಕಂಡಿತು! ಒಂದು ದೊಡ್ಡ truck ಬರುತ್ತಿತು, Gunmanನನ್ನು  ನೋಡಿದ ಕೂಡಲೇ ಸರ್ರ್ರ್ರ್ರ್ರ್ರ್ರ್ರ್ರ್ರ್.......... ಅನ್ತ truck ಡ್ರೈವರ್ ಬ್ರೇಕ್ ಹೊಡೆದ. Gunman ಒಂದು truck ನಿಲ್ಲಿಸಿಬಿಟ್ಟೆ ಅಂತ ಹಿಗ್ಗಿದ.

Truck ನಿಂದ ಒಬ್ಬೊಬ್ಬರಾಗಿ ಸಮವಸ್ತ್ರಧಾರಿಗಳು ಇಳಿಯತೊಡಗಿದರು. Gunman ಬೆವರಿದ, ಅದು Army truck ಆಗಿತ್ತು.

Gunman ಹೆದರಿ,  ಒಬ್ಬ ಸೈನಿಕನಿಗೆ ನಡೆದ ಸಂಗತಿ ತಿಳಿಸಿದ.

ಸೈನಿಕ ಮುಖ್ಯಸ್ತ  ಅ  ಸೈನಿಕನನ್ನು ಕರೆದು , ಅಲ್ಲಿ ಸೂಸು ಮಾಡುತ್ತಿರುವವನು ಯಾರಂತೆ ? ಅಂತ ಕೇಳಿದ.
ಅದಕ್ಕೆ ಅ ಸೈನಿಕ " ಸರ್ ಜಿ , ಓ ಮಿನಿಸ್ಟರ್ ಹೇಯ್ " ಅಂದ.  ಮುಖ್ಯಸ್ತ " ಕ್ಯಾ ನಾಮ್ ಹೇ  ಪೂಚ್ಹೋ" .
ಸೈನಿಕ "ಸರ್ ಜಿ  ಓ ಗೌಡ ಕಾ ಬಚ್ಚಾ " ಅಂದ.

ಕರಾಳ ರಾತ್ರಿ ....

ಈ ವಿಷಯವನ್ನು  ನನ್ನ ಜ್ಯೋತೆಲಿ ಕೆಲಸ ಮಾಡ್ತಿದ್ದ ಒಬ್ಬ ವ್ಯಕ್ತಿ  ಹೇಳಿದ್ದು, ಇದು ನಿಜ ಅಂತ ಹೇಳಿದ್ರು, ನಾನು
ಹಾಗೇನೆ ಅಂತ ಅನ್ನ್ಕೊಂಡ್ ಇದ್ದೀನಿ. ಸ್ವಲ್ಪ ಸ್ವಾರಸ್ಯವಾಗಿರಲಿ  ಅಂತ ಕಥೆ ರೂಪದಲ್ಲಿ ಪ್ರಸ್ತುತ ಪಡಿಸುತ್ತಾಇದ್ದೀನಿ,
ರಾತ್ರೆ ಅನ್ನದಿಂದ ಚಿತ್ರಾನ್ನ ಮಾಡಿದ ಹಾಗೆ  :).

ರಾಜೇಶ ಅಂತ ಒಬ್ಬ ಹುಡುಗ ಕೆಲ್ಸಕ್ಕೆ ಅಂತ ಪಟ್ನಕ್ಕೆ ಬಂದಿದ್ದ, ಕೆಲ್ಸಾನು ಸಿಕ್ಕಿತು, ಕುಮಾರ್ ಅನ್ನೋನ್ನ ಪರಿಚಯಾ ಆಯಿತು ಸ್ನೇಹಕ್ಕು ತಿರುಗಿತು. ಇಬ್ಬರು ಒಂದು ರೂಂ ಮಾಡ್ಕೊಂಡು ಇರುತ್ತಿದ್ರು.
ರಾಜೇಶ್ ಅತ್ತೆ ಅದೇ ಪಟ್ಟಣದಲ್ಲಿ ಸ್ವಲ್ಪ ಊರಾಚೆ ಮನೆ ಮಾಡಿದ್ರು , ಮಾವ ಖಾಸಗಿ ಕಂಪನಿ ಒಂದರಲ್ಲಿ
ಸಣ್ಣ ಕೆಲಸ , ಅವರಪ್ಪ ಮಾಡಿದ್ದ ಸೈಟ್ ನಲ್ಲಿ ತುಂಬಾ ಕಷ್ಟ ಪಟ್ಟು ಒಂದು ಚಿಕ್ಕದಾದ ಮನೆ ಕಟ್ಟಿದ್ರು ಮಾವ.
ಹೊಸ ಮನೆ ಪೂರ್ತಿ ಫಿನಿಶ್ ಮಾಡಿರಲಿಲ್ಲ, ಬಣ್ಣ ಒಳಗಡೆ ಮಾತ್ರ ಇತ್ತು.
ಒಂದು ದಿನ ರಾಜೇಶ್ ಮತ್ತು ಅವನ ಸ್ನೇಹಿತ ಕುಮಾರನ್ನು ಊಟಕ್ಕೆ ಕರ್ದ್ರು.
ರಾಜೇಶ್ ಮನೆ ನೋಡಿರಲಿಲ್ಲ,  first time  ಹೂಡ್ಕೋದು ಅಂತ ಕಷ್ಟ ಏನ್ ಆಗ್ಲಿಲ್ಲ, ಏಕೆಂದರೆ ಅವರ ಅತ್ತೆ ಮನೆ ಒಂಟಿ ಮನೆ. ಸುಮಾರು ನೂರಡಿ ದೂರ ಇನ್ನೊಂದು ಮನೆ !  ಹೀಗಿ ಅ ಲೇಔಟ್ ಇತ್ತು .
 

ಮಧ್ಯಾನ್ನದ ಭೋಜನ ಪುಷ್ಕಳವಾಗಿ ಮಾಡಿದ ರಾಜೇಶ್ ಮತ್ತು  ಸ್ನೇಹಿತ  ಸ್ವಲ್ಪ relax   ಮಾಡೋಣ ಎನ್ನುವಷ್ಟರಲ್ಲಿ

ರಾಜೇಶ್ ಮಾವನ ಸೆಲ್ ಗೆ ಒಂದು ಕರೆ ಬಂದಿತು, ಅಕ್ಕನಿಗೆ ಮೈಹುಶಾರಾಗಿಲ್ಲ ಬರುವದಾಗಿ ಹೇಳಿದರು.

ಅತ್ತೆ ಮಾವ ಇಬ್ಬರು ಹೊರಡುವುದಾಗಿ ರಾಜೇಶ್ ಗೆ ಹೇಳಿದರು, ಮನೆ ಇನ್ನು ಹೊಸದಿರುವುದರಿಂದ

 ರಾತ್ರೆ  ರಾಜೇಶ್ ಅಲ್ಲೇ ಉಳಿದರೆ ಒಳ್ಳೆಯೆದು, ಎಂದು request ಮಾಡಿಕೊಂಡರು.

 ರಾಜೇಶ್, " ಏನು ತೊಂದರೆ ಇಲ್ಲ  ! ಕುಮಾರ್ ತನ್ನ ಜ್ಯೋತೆ ಇರ್ತಾನೆ ನಾಳೆ ಭಾನುವಾರ ಕೆಲಸಕ್ಕೆ ರಜೆ ಇರುವುದರಿಂದ
 ಇಲ್ಲೇ ಇರ್ತೀವಿ" ಎಂದ. ಕುಮಾರ್ ತನಗೆಕೆಲಸ ವಿರುವುದಾಗಿ ತಾನು ಉಳಿಯಲು  ಆಗುವುದಿಲ್ಲ ಎಂದು ಹೇಳಿದ.

ರಾಜೇಶ್ ಒಬನನ್ನು ಹೊರತು ಪಡಿಸಿ ಎಲ್ಲರೂ ರಾತ್ರೆ ಹೊರಟರು.

Tv ನೋಡುತ್ತಾ ಕಾಲ ಕಳೆದ ರಾಜೇಶ್ ರಾತ್ರೆ ಮಲಗಲು ರೂಮಿಗೆ  ಹೊರಟ.

ಮನೆ ಚಿಕ್ಕದು,  ಮನೆಯ ಬಾಗಿಲು ತೆಗೆದ ಕೂಡಲೇ ಕಾಣುವುದು ಅಡುಗೆ ಮನೆ entrance , ಕಾಲಿಟ್ಟರೆ

ಹಾಲ್ ಬಲಗಡೆ ಒಂದು ರೂಂ ಅದಾದ ನಂತರ ಬಚ್ಚಲು ಮನೆ, ಒಳ್ಳೆ ರೈಲ್ವೆ ಬೋಗಿ  ಇದ್ದಹಾಗೆ ಇತ್ತು.

ಮಾಡಲು ಕೆಲಸವಿಲ್ಲದ ಕಾರಣ, ರಾಜೇಶ್ ಬೇಗನೆ ನಿದ್ದೆ ಮಾಡೋಣ ಎಂದು ಕೊಂಡು ರೂಮ್ನ ಲೈಟ್ ಆಫ ಮಾಡಿ ಮಂಚದ ಮೇಲೆ ಕುಳಿತ.

ರೂಮ್ನ ಬಾಗಿಲನ್ನು ಬಡಗಿ ಅರ್ಧ ಕೆಲಸ ಮಾಡಿದ್ದರಿಂದ ಕದಾ ಹಾಕಲು ಆಗುತ್ತಿರಲ್ಲಿಲ್ಲ. ರಾಜೇಶ್  ಮಲಗಲು ಮುನ್ನ ಕುಮಾರ್ ಫೋನ್ ಬಂದಿತು. ಕುಮಾರ್ ಸ್ವಲ್ಪ ಕೀಟಲೆ ಸ್ವಭಾವದವನು ,ಫೋನಿನಲ್ಲಿ ಮನೆಯ ಹಿಂದೆ ಸ್ಮಶಾನವಿರುವುದಾಗಿ ಹೇಳಿದ.

" ಮಗ ದಂ ಹೊಡಯಲು ಹೊರಗೆ ಬರಬೇಡ , ರಾತ್ರಿ ಹೊತ್ತು  ಹೂತಿದ್ದ ಹೆಣಗಳು ವಾಲ್ಕಿಂಗ್ ಹೋಗ್ತಾರ್ತವೆ ಹುಷಾರ್ ಎಂದ '
ಇಬ್ಬರು ಜ್ಯೋರಾಗಿ ನಕ್ಕರು, ಆದರೆ ರಾಜೇಶ್ದು ಅಸಹಾಯಕ ನಗು.

ಸ್ಮಶಾನ ವಿದುದ್ದು ನಿಜ.

 

ರಾಜೇಶ್,  ಕುಮಾರನನ್ನು ಶಪಿಸುತ್ತ ಮಲಗಿದ. ಘಾಡವಾದ ನಿದ್ದೆ, ಹಿಂದೆಂದು ಬರೆದ ರೀತಿ ಇತ್ತು .
ಬೆಳದಿಂಗಳಿನ ಅ ಬೆಳಕು ತುಂಬಾ ಸುಂದರವಾಗಿತ್ತು , ಗಾಳಿ ವೇಗಾವಾಗಿ ಸಂಚರಿಸುತ್ತ  ಮರಗಳ  ಪೂಟರೆ ಗಳಲ್ಲಿ
ಹಾದು ಶಿಳ್ಳೆ ಹಾಕುತಿತ್ತು.

ಮಧ್ಯ ರಾತ್ರಿ ರಾಜೇಶ್ಗೆ ಸ್ವಲ್ಪ ಎಚ್ಚರ ವಾಯಿತು, ದೂರದಲ್ಲಿ ಒಂದು ಎಳೆಯ ಮಗು ಅಳುತ್ತಿರುವ ಶಬ್ದ ಕೇಳಿ ಬರುತಿತ್ತು .
ಆಆಆಆಆಆಅ ಆಆಆಆಆಆಆಆಅ.......

ಯಾರೋ ಪಕ್ಕದ ಮನೆಯವರು ಎಂದು ತಿಳಿದು ಹೊರಳಿದ.

3 ಸೆಕೆಂಡ್ ನಂತ ಗಾಬರಿಯಿಂದ ಎದ್ದು ಯೋಚಿಸಿದ, ಸುಮಾರು 100 ಅಡಿಗಳ ಅಂತರದಲ್ಲಿ  ಇದ್ದವು ಮನೆಗಳು.
 ಹೇಗೆ ಮಗು ಅಳುವ ಧ್ವನಿ ಕೇಳುತ್ತದೆ ? ಎಂದು ಒಮ್ಮೆ ಯೋಚಿಸಿದ.

ಸ್ವಲ್ಪ ಬೆವರಿದ, ಶಬ್ದ ಸ್ವಲ್ಪ ಹತ್ತಿರವಾದಂತೆ ಆಯಿತು. ಧೈರ್ಯ ಮಾಡಿ ರೂಮ್ನ ಬಾಗಿಲು ಎಳೆಯಲು ನೋಡಿದ

ಬಾಗಿಲ  ಕೆಲಸ ಪುರ್ತಿಯಾಗಿಲ್ಲ ಎಂದು ಅವನಿಗೆ  ಅರಿವಾಯಿತು. ಸದ್ದು ಎಲ್ಲಿಂದ ಬರುತ್ತಿದೆ ಎಂದು ಆಲಿಸುತ್ತ ರೂಂ ನ ಹೊರಗೆ ಬಂದ, ಗಾಬರಿಯಿಂದ ಸ್ವಿಚ್ ಎಲ್ಲಿದೆ ಎಂಬುದನ್ನ ಮರೆತಿದ್ದ. ತೀರ ಕಗ್ಗತಲು ಇರಲಿಲ್ಲ ಹೀಗಾಗಿ ಅಡುಗೆ ಮನೆಗೆ ಓಡಿಹೋಗಿ ತೆರದಿದ್ದ ಕಿಟಿಕಿ
ಮುಚ್ಚಿದ ( ಕಿಟಕಿಇಂದ ಕೇವಲ 50 ಅಡಿ ದೂರದಲ್ಲಿ ಸ್ಮಶಾನದ ಗೋಡೆ ಕಾಣುತಿತ್ತು).

ತಿರುಗೆ ರೂಂ ಗೆ ಹಿಂದಿರುಗಿ  ಮಲಗಿದ.  ಕೇವಲ 2 ನಿಮಿಷದ ಆದಮೇಲೆ ಮಗು ಅಳುವ ಸದ್ದು ಅಡುಗೆ ಮನೆ ಇಂದ ಬರುತ್ತಿರುವ
ಹಾಗೆ ಆಯಿತು.
ಹೋ ! ದೇವ ನನ್ನನ್ನು ಕಾಪಾಡು ಎಂದು ಬೇಡಿದ, ಧೈರ್ಯ ಮಾಡಿ ಕೇವಲ 5 ಸೆಕೆಂಡು ಗಳಲ್ಲಿ ಅಡುಗೆ ಮನೆಯ ಕದ ಹಾಕಿ
ಬಂದ, ತೀವ್ರವಾಗಿ ಉಸಿರಾಡುತ್ತಾ  ಮುಸುಕು ಹಾಕಿದ , ಗಡಗಡ  ನಡಗುತ್ತಿದ್ದ.

ನಿಶಭ್ಧ ! 

ರಾಜೇಶ್ ಉಸಿರಾಡುವುದು ಬಿಟ್ರೆ  ಎಲ್ಲಾ pin drop silence, ಸಧ್ಯ ಬದುಕಿತು  ಜೀವ ಎನ್ನುವಷ್ಟರಲ್ಲಿ ......
ಮಗು ಅಳುವ ಸದ್ದು,  ಈಗ ! ಹಾಲ್ನಿಂದ ಬರಲು ಶುರುವಾಯಿತು.  ಅ ಅಳುವಿನಲ್ಲಿ ನೋವು ಇತ್ತು
2 ತಿಂಗಳ  ಮಾತು ಬರದ ಅಸಹಾಯಕ ಮಗುವಿನ  ಅಳು, ಅ ರೋದನೆ ತುಂಬಾ ಕರ್ಕಶ ವಾಗಿ ಕೇಳಿ
ಬರುತ್ತಿತು.

ರೊಯ್ಯನೆ ಎದ್ದು ಕಷ್ಟ ಪಟ್ಟು ತಾನಿದ್ದ ಕೊಣೆಯ ಬಾಗಿಲನ್ನು ಹಾಕಿದ , ಆದರೆ ಬಡಗಿ ಅರ್ಧ ಕೆಲಸ ಮಾಡಿದ್ದರಿಂದ
ಚಿಲಕ ಇರಲಿಲ್ಲ  ! ಅತ್ತೆ ಮಾವನನ್ನು ಶಪಿಸುತ್ತ , ದಿಕ್ಕು ತೋಚದೆ ಅಲ್ಲೇ ಇದ್ದ ಸ್ಟೂಲ್ ಒಂದನ್ನು ಬಾಗಿಲಿಗೆ ಒರಗಿಸಿದ.

ಕ್ಷುದ್ರ ಶಕ್ತಿಯ ಮುಂದೆ ತಾನು ಏನು ಮಾಡಲು ಸಾಧ್ಯ ? ಎಂಬುದು ಅವನಿಗೆ ಅರಿವಿತ್ತು.

ಬೆಳದಿಂಗ್ಗಳ  ಬೆಳಕು ರಾಜೇಶ್ ನ ಚುರುಕು ಚಾಲನೆಗೆ ಸಹಾಯಕವಾಗಿತ್ತು .

ಮತ್ತೆ ನಿಶಭ್ದ ....ಎಲ್ಲೆಲ್ಲು  ನಿಶಭ್ದ

 ಮತ್ತೆ ಅ ಅಳು  ,,,,, ಆಆಆಆಆಆಅ ಎಂದು ತಾನು ಮಲಗಿದ್ದ  ಮಂಚದ ಅಡಿಯಿದ ಕೇಳಿಬರುತ್ತಿತು.

ದಿಭ್ರಂತನಾದ ! ಕೈ ಕಾಲು ಚಾಲನೆ ಕಳೆದು ಕೊಂಡಿತು, ಮಾತು ಬರದಂತಾಯಿತು... ಕೇವಲ
ಕಿವಿಗಳು ಅ ಭಯಾನಕ ರೋದನವನ್ನು ಆಲಿಸುತ್ತಿತು. ಒಮ್ಮೆಲೇ ಚೈತನ್ಯ ಕಂಡ ಕೈಕಾಲುಗಳು ಅದರ ತೊಡಗಿತು.
ಬೆಳೆಕೆ ಈಗ ತನಗೆ ಆಸರೆ ಎಂದುಕೊಂಡ , ಆದರೆ ಬೆಳಗಾಗುವ ಲಕ್ಷಣ ಕಂಡುಬರಲಿಲ್ಲ !! ವಿದ್ಯುತ್ ದೀಪ ಒಂದೇ ತನಗೆ ಧೈರ್ಯ ತುಂಬಲು ಸಾಧ್ಯ ವೆಂದು ಅರಿತ , ಆದರೆ ಸ್ವಿಚ್ ಎಲ್ಲಿದೆ ? ಎಂಬುದು ಮರೆತಿದ್ದ . ಗೋಡೆಯೆಲ್ಲ ತಡಕಾಡಿ ಕೊನೆಗೆ ಎಲ್ಲಾ
ಸ್ವಿಚ್ ಗಳನ್ನೊಳಗೊಂಡ ಬೋರ್ಡ್ ಗೆ ಗುದ್ದಿದ , ಆಗ ಬೆಳಕು ಮೂಡಿತು.

ಆಗ ಮಂಚದ ಬಳಿ ಕಂಡದ್ದು !!
 ಬಿಳೀ ಬಣ್ಣದ
 ಚಿಕ್ಕ
 ಮಾರ್ಜಾಲ  ಮರಿ.

ಅಭ್ಹ  !! ದೇವರೇ  ನನ್ನ ಜೀವ ಉಳಿಯಿತು ಎಂದು ಕೊಂಡ, ಅ ಮುದ್ದಾದ ಬೆಕ್ಕಿನ ಮರಿ ತನ್ನ ತಾಯಿಯನ್ನು ಹುಡುಕುತ್ತ ಮನೆಯೊಳಗೇ
ಪ್ರವೇಶ ಮಾಡಿರಬೇಕು ಎಂದುಕೊಂಡ. ಬೆಕ್ಕಿನ ಮರಿ ಮನುಷ್ಯರ ರೀತಿ ಅಳುವುದು ಎಂದು,  ಆಗ ಅವನಿಗೆ ಗೊತ್ತಾಯಿತು .

:)

ಆ ದಿನಗಳು ...

ಅ ದಿನಗಳಲ್ಲಿ ಕೆಲವು ಶ್ರೀಮಂತರ ಮನೆಗಳಲ್ಲಿ ಜನ ಜಾತ್ರೆ , ಹಾಲ್ ತುಂಬಾ ಸದ್ದ್ದು ಮಾಡುತಿದ್ದ ಹುಡುಗರು.
ಮನೆ ಒಡತಿ,  "ಗಲಾಟೆ ಮಾಡ್ದೆ ಸುಮ್ನೆ ಕೂತ್ಕೊಲ್ದ್ರೋ , ಇವನು ಯಾರೋ !" ಎಂದು ಒಬ್ಬ ಹುಡುಗನ ಕಡೇ
ಬೆಟ್ಟು ತೂರಿಸಿ ಪ್ರಶ್ನಿಸುತಿದ್ದರು. "ರೀ.... . (ಆಗಿನ್ನೂ ಆಂಟಿ ಅಂಕಲ್ ಅಷ್ಟು ಚಾಲ್ತಿ  ಇರಲ್ಲಿಲ್ಲ ) ಇವನು ನಮ್ಮ ರೋಡ್ ನಲ್ಲೆ ಇರೋದು " ಹೀಗೆ ಉತ್ತರಿಸುತ್ತಿದ ಒಬ್ಬ ಹುಡುಗ.

ನಾವೆಲ್ಲಾ ಮನೆಯೊಳಗೇ ಇರೋದಕ್ಕೆ ಮನೆಯ ಒಡೆಯನ ಧಾರಾಳತನವೇ ಕಾರಣ .
 ಅಂತು ಸಮಯ ಬಂದಿತು ನಾವೆಲ್ಲಾ ನಿರೀಕ್ಷಿಸಿದ್ದ ಒಂದು switch on ಮಾಡಲಾಯಿತು, ಅದೊಂದು ಅದ್ಭುತವಾದ ಮಾಂತ್ರಿಕ ಶಕ್ತಿಯ ಯಂತ್ರ " TV " ಯಂದು ಎಲ್ಲರೂ ಕರಯುತ್ತಾರೆ, ಅದು ನಮ್ಮ ಮುಂದೆ ಕಣ್ಣು ತೆರೆಯಿತು .ಪಟಪಟಿ ಚಡ್ಡಿಗೆ zoom ಮಾಡಿರೋ ತರಹದ ಒಂದು ಚಿತ್ರ ಅದನ್ನ PAL color bars ಅಂತ ಕರಿತಾರೆ , ತುಂಬಾ ಕರ್ಕಶ ರೀತಿಯ ಸೌಂಡ್ನೊಂದಿಗೆ ಮೂಡುತ್ತಿತ್ತು.

 ಈ ಚಿತ್ರ ಯಾವಾಗ ಬದಲಾಗುತ್ತದೆ ಎಂದು ಕಾತುರ ದಿಂದ ನೂಡುತಿದ್ದೆವು. "ಅಭ್ಹ  ! ಬಂತು" ಎಂಬ ಸದ್ದು
ಮೂಡದ ಮರೆಇಂದ ಎರಡು ಹಾವಿನ ಹೆಡೆಗಳು ಮಧ್ಯಇರುವ ನಾಗಮಣಿಯನ್ನು ಸಂರಕ್ಷಣೆ ಮಾಡುವಂತೆ ಕಾಣುವ
ದೂರದರ್ಶನ ಚಿನ್ಹೆ  ಮೂಡುತ್ತಿತ್ತು. ಎಲ್ಲರ ಮುಖದಲ್ಲಿ  ಸಂತಸ.

ದೂರದರ್ಶನ ಕಾರ್ಯಕ್ರಮ್ಮಕೆ ಸ್ವಾಗತ ಕೂರುತ್ತಿದ್ದರು, ನಿರೂಪಕಿ ಯಾವ ಸೀರೆ ಉಟಿರುವಳು  ಎಂದು ಮನೆ ಒಡತಿ ತನ್ನ ಸಖಿಯರೊಂದಿಕೆ ಚರ್ಚೆ ಮಾದುತ್ತಿದಳು, ಏಕೆಂದರೆ ನಾವೆಲ್ಲಾ ನೋಡಿತಿದ್ದುದ್ದು Black and white TV .

ಹೀಗೆ ದೂರದರ್ಶನ  ಸುಮಾರು ವರ್ಷಗಳ ಕಾಲ ನಮ್ಮ ಮೇಲೆ ಮನರಂಜನೆಯ ಮಳೆ ಸುರಿಸಿದೆ .
'ಏಕ ಮೇವ ಅದ್ವಿತೀಯ ' ಎಂಬಂತೆ , 'ಊರಿಗೆ ಒಬ್ಬಳೇ ಸುಂದರಿ' ಎಂಬಂತೆ ಮೆರೆಯುತಿತ್ತು.
ಅವರು ತೋರಿಸುತಿದ್ದ ಕಾರ್ಯಕ್ರಮ ನಾವು ನೂಡುತ್ತಿದೆವು.

ಸೋಮವಾರ ಮೂಡಿಬರುತ್ತಿದ್ದ "ಚಿತ್ರ ಮಾಲ " ಎಲ್ಲಾ ಭಾಷೆ ಗಳ ಚಿತ್ರಗೀತೆಗಳ ಕಾರ್ಯಕ್ರಮ.
ಕನ್ನಡ ಹಾಡನ್ನು ನೋಡುವ ನೀರಿಕ್ಷೆ ಇರುತಿತ್ತು , " next ಸಾಂಗ್ ಇರಬಹುದು , ತಮಿಳು ಹಾಡು ತೋರಿಸಿದ ಮೇಲೆ, ಕನ್ನಡ ಬಂದೆಬರೊತ್ತೆ " ಎಂಬ ಲಕ್ಕಚಾರದಿಂದ ನೂಡುತಿದ್ದೆವು. ಅಂತು ಕನ್ನಡ ಹಾಡು ಬಂತು ಎಂದರೆ ,
ಗುರುತು ಪರಿಚಯವಿಲ್ಲದ ಹೀರೋ ಹಾಡು ಹಾಕ್ತಿದ್ರು , ಕಳಪೆ ಸಂಗೀತ,ಕಳಪೆ ನಟನೆ ಇಂದ ಕೂಡಿದ ಚಿತ್ರ ಗೀತೆ .
ನಮಗೆ ಆಗುತಿದ್ದ ಅವಮಾನ ಅಷ್ಟಇಷ್ಟ ಅಲ್ಲ, ನಮ ಜ್ಯೋತೆಯಲ್ಲಿ ಕುಳಿತು ನೋಡುತಿದ್ದ ತಮಿಳರು ತಿರುಗಿ ನೋಡಿ ನಗುತಿದ್ದರು.

ಭಾನುವಾರ regional language ಸಿನಿಮಾ ಗಳು , ಎಷ್ಟೇ ದರಿದ್ರ ವಾಗಿದ್ರು ನೂಡುತಿದ್ದೆವು.
ಬೀಡಿ ಸೇದುವುದನ್ನು 10 ನಿಮಿಷ ತೂರಿಸುತಿದ್ದ Art film ಗಳು , ಓರಿಯ ,ಅಸ್ಸಾಮಿ,ಮಣಿಪುರಿ ಹೀಗೆ
ಯಾವಚಿತ್ರಗಳನ್ನೂ ಎಡ ಬಿಡದೆ ನೂಡುತಿದ್ದೆವು .  ಹೀಗೆ ಒಮ್ಮೆ 'ಬ್ಯಾಂಕರ್ ಮಾರ್ಗಯ್ಯ' ಯಂಬ
ಲೋಕೇಶ್ ನಟಿಸಿದ ಚಿತ್ರ ಪ್ರಸಾರವಾಯಿತು, ಅದನ್ನು ನೋಡಲು ಮಾರವಾಡಿಗಳ ಮನೆಗೆ ಹೋಗಿದ್ದೆವು.
ಅ ಮನೆಯವರು "ಬ್ಯಾಂಕರ್ ಮರ್ಗಯಾ  ಮರ್ಗಯಾ " ಎಂದು ಲೇವಡಿ ಮಾಡಿದ್ದು ಉಂಟು.
ನಮಗೆ ಅಪಮಾನ ಮಾಡಿದ ನಿರ್ಮಾಪಕ ನಿರ್ದೇಶಕರುಗಳಿಗೆ  ನಾವು ಶಾಪ ಹಾಕಿದ್ದು ಉಂಟು.

"ಮೂಡಗಳೇ  ನನ್ನ ಮೇಲೆ ಬೀಳದಿರೀ  ಜ್ಯೋಕೆ , ನಾನು ನಿಮ್ಮನ್ನು ಚುಚ್ಚೆ ಬಿಡುವೆ " ಎಂದು ಚೂಪಾದ
ಮುನಿರೆಡ್ಡಿ ಪಾಳ್ಯದ ಬೆಂಗಳೂರು TV tower ಹೇಳತೊಡಗಿತು. ನಮಗೆಲ್ಲಾ ಸಂತಸ ಪ್ರತೀ ಗುರುವಾರ
ಕನ್ನಡ ಹಾಡುಗಳು , ರೇಡಿಯೋ ದಲ್ಲಿ ಕೇಳುತಿದ್ದ ಹಾಡುಗಳು ಈಗ ದೃಶ್ಯ ರೂಪದಲ್ಲಿ .

ಓಹೋ .. ಈ ಹಾಡು  ವಿಷ್ಣು ವರ್ಧಂದಾ ?  ಈ ಹಾಡು ಅಣ್ಣವರುದ್ದ ? ಹೀಗೆ ಆಶ್ಚರ್ಯ ಪಡುತಿದ್ದೆವು.
  "ರವಿ ವರ್ಮನ ಕುಂಚ ದ " ಹಾಡು ಅಣ್ಣವ್ರುದ್ದು ಅನ್ನ್ದುಕೊಂಡಿದ್ದೆ ರಾಜೇಶ್ ಎಂದು ತಿಳಿದ ಮೇಲೆ ಸ್ವಲ್ಪ ಬೇಸರವಾಗಿದ್ದು ಉಂಟು. ಹೀಗೆ  ಸತ್ಯ ಅಸತ್ಯಗಳ ಪರಿಚಯ ವಾಗುತ್ತ ಹೋಯಿತು.

 ಬರಬರುತ್ತ ಕನ್ನಡ ಪ್ರಭ ಪತ್ರಿಕೆ ಯಲ್ಲಿ ಸಿನಿಮಾ ಜಾಹಿರಾತಿನ ಮೇಲೆ  " ಈ ಚಿತ್ರದ ಹಾಡನ್ನು
ಚಿತ್ರಮಂಜರಿ ಯಲ್ಲಿ ನೋಡಿ ಆನಂದಿಸಿರಿ" ಎಂದು ಬರುತ್ತಿತು, ನಮ್ಮ ಉತ್ಸಾಹಕ್ಕೆ ಕೊರತೆಯೇ ಇರಲ್ಲಿಲ್ಲ.
ಶಂಕರ್ ನಾಗ್ ನಡೆಸಿಕೊಡುತ್ತಿದ್ದ  ಸಂದರ್ಶನ ,ಸುತ್ತ ಮುತ್ತ , ಮುನ್ನೋಟ ಹೀಗೆ ಹಲವಾರು ಕಾರ್ಯಕ್ರಮಗಳು.
'ಖನ್ನಡ' news reader ಗಳಾದ "ಕೃಷ್ಣಾ ಗಲಿ ಗಲಿ , ರಾಮಕೃಷ್ಣ ,ಸಭೀಹ ಬಾನು,' ಇವರೆಲ್ಲರನ್ನು
ಪ್ರತಿದಿನ ನೋಡಿ ನೋಡಿ ನಮ್ಮ ಮನೆಯವರೆನೋ ಎಂಬಂತೆ ಇರುತಿತ್ತು.

ಕೆಲಒಮ್ಮೆ  announcers ಗಳು ಸೀರೆ ಸರಿಮಾಡಿಕೊಳ್ಳುತಿದ್ದನು ಫಟಿಂಗ ಕ್ಯಾಮರಾಮೆನ್ ಗಳು ಸೇರೆಹಿಡಿಯುತಿದ್ದರು . "ಇದೀಗ ದೆಹಲಿಗೆ " ಎಂಬ ನಾಮ ಫಲಕ 10 ನಿಮಿಷ ವಾದರೂ ಇರುತಿತ್ತು.

ಆಗಿದ್ದ  ಶತ್ರುಗಳೆಂದರೆ KEB ಮತ್ತು ರಾಜಕೀಯ ವ್ಯಕ್ತಿಗಳು.
ಈ  ನಾಯಕರು ಸತ್ತರೆ , ನಾವೇ ಸತ್ತಂತೆ ಭಾಸವಾಗುತಿತ್ತು.
TV announcers ಗಳು ವಿಧವೆಯರಂತೆ ಬಂದು ನಿಂತು , "ಎಲ್ಲಾ ಕಾರ್ಯಕ್ರಮ ರದ್ದು ಪಡಿಸಲಾಗಿದೆ "
ಎಂದು  ಹೇಳುತಿದ್ದರು. ಈ ವ್ಯಕ್ತಿಗಳೆಲ್ಲ ಸಾಯುತಿದ್ದ ದಿನಗಳು ಯಾವುವು ಎಂದರೆ , ಗುರುವಾರ -Gaint robot ಇರುತಿದ್ದ ದಿನ , ಶನಿವಾರ  Didi 's comedy show  ಇರುತಿದ್ದ ದಿನ. ಭಾನುವಾರ ಕೇಳಲೇ ಬೇಡಿ
ಈಗ ನೆನಸಿಕೊಂಡರು ಬೇಜಾರ್ಅಗೊತ್ತೆ .
ಎಲ್ಲ ಧರ್ಮದ ಪಂಡಿತರಿಗೂ  demando demandu , ಗೀತೆ , ಖುರಾನ್ ,ಬೈಬಲ್  ,ಗ್ರಂಥ ಸಾಹಿ  ಹಿಗೆ
one by one ಸತತವಾಗಿ (ಅಳುತ್ತ ) ಬರುತಿತ್ತು . ಕೆಲವು ಘಂಟೆಗಳ ಕಾಲ TV ಆನ್ ಮಾಡಿದ್ರೆ ಸತ್ತವನ ಫೋಟೋ , ಸಾರಂಗಿ background music  ಮೂಡಿ ಬರುತ್ತಿತು. ಹೆಣ ಯಾರ್ ಮನೆಯಲ್ಲಿ ಬಿದ್ದಿದೆ ಎನ್ನುವುದು ಅನುಮಾನವಾಗಿತ್ತು.

KEB ನವರು ತಪ್ಪದೆ ಶನಿವಾರ ಕನ್ನಡ ಚಲನ ಚಿತ್ರದ ಸಮಯಕ್ಕೆ power cut ಮಾಡುತಿದ್ರು (ಒನ್ seanson ನಲ್ಲಿ), ಈಗಲೂ ಸಂಪ್ರದಾಯವನ್ನು ಇವರ ಮಕ್ಕಳು ನಡೆಸಿಕೊಂಡು ಬರುತಿದ್ದಾರೆ (BESCOM).

postal department ಗೆ ಕಷ್ಟ ಕೊಟ್ಟ ಕಾರ್ಯಕ್ರಮ ಎಂದರೆ "ಪ್ರಿಯ ವೀಕ್ಷಕರೆ ", ರಾಶಿ ರಾಶಿ ಪತ್ರಗಳ ಜ್ಯೋತೆ ಕೂರುತಿದ್ದ ಶ್ರೀನಿವಾಸ್ ಪ್ರಭು ಮತ್ತು ನಳಿನಿ ರಾಮಣ್ಣ ಕೇವಲ ಹೊಗಳಿಕೆಯ ಪತ್ರಗಳನ್ನು ಓದುತಿದ್ದುದ್ದು ಈಗಲೂ ಕಣ್ಣಿಗೆ ಕಟ್ಟಿದ ಹಾಗೆ ಇದೆ.

ಕೆಲೊಮ್ಮೆ ಚಲನಚಿತ್ರಗಳನ್ನೂ cancel ಮಾಡಿ ಗೀತಚಿತ್ರಗಳನ್ನೂ ಹಾಕುತ್ತಿದ್ರು.
ಗೀತಚಿತ್ರದಲ್ಲಿ ಮಾಡಿದವರೆಲ್ಲ ನಿಲಯದ ಕಲಾವಿದರೇ , ಕ್ಯಾಮರಾಮನ್ ತಮ್ಮ ,ಸ್ಟೇಷನ್ Director ge ಬೇಕಾದವರು.

ಕೆಲವೊಂದು ಒಳ್ಳೆಯಾ serial ಗಳು ಬರುತ್ತಿತು "ಕ್ರೇಜಿ ಕರ್ನಲ್ ", "ದೊಡ್ಡಮನೆ " , "ಅಜಿತನ ಸಾಹಸ" ಹೀಗೆ .
 ಕೆಲವು ನಾಟಕಗಳು , ಭಾಸ್ಕರನ ಡೈರಿ , ಗುನ್ಪುಟ್ಟಿ, ಮುನ್ಪುಟ್ಟಿ, ಭಾವಿ ಕಳೆದಿದೆ (ಪ್ರುಥಿವಿರಾಜ್ ರ ಅಭಿನಯ ಅಮೋಘ).

ಈ ಸಾರ್ವಭೌಮತ್ವಕ್ಕೆ  ತೆರೆಯೆಳದಿದ್ದು  ತಮಿಳರ ಕನ್ನಡ ಚಾನೆಲ್ ಆದ "ಉದಯ" TV .

ಇಗ ನೋಡಿದರೆ A to Z ಚಾನೆಲ್ ಗಳಿವೆ, ಬೆಳ್ಳಿಗೆ ಉಸಿರಾಡುವ ಕಾರ್ಯಕ್ರಮ ದಿಂದ ಶುರುವಾಗಿ
ಉಸಿರು ತೆಗೆಯುವ  crime report  ದಿಂದ ಕೊನೆಗೊಳ್ಳುತದ್ದೆ, ಈ  ಮಾದರಿಯ ಕಾರ್ಯಕ್ರಮಗಳು ಎಲ್ಲ ಚಾನೆಲ್ ನಲ್ಲೂ ಪ್ರಸಾರವಾಗುತ್ತದೆ.

ನೀವು ಹೋದ ಜನ್ಮ ದಲ್ಲಿ ಕತ್ತೆ,ನಾಯಿ, ಹಂದಿಯಾಗಿದ್ರೋ ತಿಳಿದುಕೊಳ್ಳಲು ಜನ್ಮ ಜನ್ಮಾಂತರ ಟೈಪ್
ಕಾರ್ಯಕ್ರಮಗಳು. ಭವಿಷ್ಯ ಹೇಳುವ 'ಭೂತಾಕಾರದ' ವಿದೂಷಕರು (ಜ್ಯೋತಿಷಿಗಳು ).

ಈ ಎಲ್ಲಾ ಅಬ್ಬರದ ನಡುವೆ 'ದೂರ' ದರ್ಶನ ವಾಗಿದೆ, ಅದಕ್ಕೆ ಕಾರಣ, ಆಗ ಹೇಗೆ ಇದ್ದರೋ ಇಗಲೂ ಹಾಗೆ ಇದ್ದಾರೆ  ಅವರೆಂದು ಬದಲಾಗುವುದಿಲ್ಲ .....................

ಕೋರ್ಟ್ ಆದೇಶ

ಶಬ್ದ ಮಾಡೋ ಫ್ಯಾನ್ ತಿರುಗುತ್ತಇರೊತ್ತೆ, ಕಟಕಟೇಲಿ  ಕೋಳಿ ನಾಗ ಮೈಕೈ ಕೇರ್ಕೊತ  ನಿಂತಿದ್ದ , ಹಿಂದೆ ಪೋಲಿಸ್ ನವರು,ಧೂಳ್ ಕೋಟಿನ ಲಾಯರ್, ತಲೆ ತುಂಬಾ ಎಣ್ಣೆ ಬಳ್ಕೊಂಡುಇರೋ  ನ್ಯಾಯಾಧೀಶರು.
ನ್ಯಾ: ಏನ್ರೀ ಕೇಸ್ , ಅ ಮನುಷ್ಯನಿಗೆ ಸುಮ್ನಿರೋಕ್ಕೆ ಹೇಳ್ರಿ, ಕೇರ್ಕೊತ  ನಿಂತಿದ್ದಾರಲ್ಲ ಅವ್ರಿಗೆ.
ವಕೀಲರು : ಯುವರ್ ಆನರ್ ,  ಈ  ವ್ಯಕ್ತಿ ಕೋಳಿ  ನಾಗ ಅಂತ , ಇವ್ನ್ಮೇಲೆ ತುಂಬಾ ಕೇಸ್ ಇದೆ.
ನ್ಯಾ: ಸರಿ ಇವತ್ತಿನ್ನ ಕಥೆ ಏನು ?
ವ: ಕೆಲವು ಮಾರಕಾಸ್ತ್ರ ಇಟ್ಕೊಂಡು ಓಡಾಡ್ತಿದ್ದ, ಪೋಲಿಸ್ ಇವನನ್ನ ಅರ್ರೆಸ್ಟ್ ಮಾಡಿದ್ದರೆ , ಕಾನೂನ್ ಪ್ರಕಾರ ಆಯುಧಗಳನ್ನೂ
    public ಆಗಿ ಇಟ್ ಕೊಳೋ ಹಾಗಿಲ್ಲ.
ನ್ಯಾ: ಇವರೇ ... ಏನ್ರಿ ಇದೇನು ದಸರ ಸೀಸನ್ ನ weapons ಇಟ್ ಕೊಳಕ್ಕೆ  ? ಏಕೆ ಹೀಗೆ ಮಾಡಿದ್ರಿ  ?
ಕೋಳಿ: ಸಾರ್ , ನಾನ್ ಏನಾದ್ರು ಯುಜ್ ಮಾಡಿದನ ಸಾರ್ . ಸಾಣೆ ಇದ್ಸೋಣ ಅಂತ ಇಚೆಗೆ ತ್ಯಗಿ ತಾಗಿದ್ದೆ , ಅಷ್ಟ್ರಲ್ಲಿ  
          ಪೋಲಿಸ್............
ನ್ಯಾ: ಆದರು ಹೊರಗಡೆ ಹೀಗೆ, ತಪಲ್ಲ್ವ ?
ಕೋಳಿ: ಯಾವ್ದು ಸಾರ್ ತಪ್ಪು ? ನಾನ್ ಏನ್ ಮಚ್ಚು ಲಾಂಗು ಬೀಸಿದನ , ಹಂಗಿದ್ರೆ ನಮ್ಮ ದೇವರಗಳನ್ನ ಅರ್ರೆಸ್ಟ್ ಮಾಡಿ.
           ಅವರಹತ್ರಾನು ಎಲ್ಲಾ ಲಾಂಗು ಮಚ್ಚು ಇರೋಕ್ಕಿಲ್ವಾ ? ಈ ದೇವರ್ಗೋಳುತಾವ ಕತ್ತಿ, ಚಾಕು , ಎಲ್ಲಾ ಐತ್ಹೆ ಅದು
          public ಅಲ್ಲೇ   ತೋರ್ಸಿತವ್ರೆ. ಅವರ ಮೇಲಿನ ಭಯಕ್ಕೆ ಜನ ಅಡ್ಡ ಬೀಳೋದು , ಭಕ್ತಿ ಅಲ್ಲ  ಅವರನ್ನ ಏಕೆ ಬಿಟ್ರಿ?
ನ್ಯಾ: ರೀ ಇವರೇ .. ಕೋಳಿ ಹೇಳೋದು ಕರೆಕ್ಟ್ ಕಂಡ್ರಿ ... ಕೋಳಿ ನಿಂಗುನು ಶಿಕ್ಷೆ ಆಗೊತ್ತೆ
ತೀರ್ಪು : ಕಾನೂನು ಪ್ರಕಾರ ಯಾರೇ ಆಗಲಿ ಮಾರಕಾಸ್ತ್ರ ಇಟ್ಕೊಂಡು ಇದ್ರೆ  ಅದು ಯಾರೋ ಕೊಲೆಗೆ ಸಂಚು ಅಂತ
            ನ್ಯಾಯಾಲಯ ನಿರ್ಧರಿಸುತ್ತದೆ .  ಆರೋಪಿಗೆ 1ತಿಂಗಳ ಶಿಕ್ಷೆ , ೨೫೦ ರುಗಳ  ದಂಡ ವಿಧಿಸಲಾಗೊತ್ತೆ . ಹಾಗೆ
            ಆರೋಪಿ ಕೊಟ್ಟ ಮಾಹಿತಿ ಪ್ರಕಾರ. ಎಲ್ಲ  ದೇವರುಗಳನ್ನು ಪೊಲೀಸರು ಅವರ ವಶಕ್ಕೆ ತೊಗೊಂಡು ಕೋರ್ಟ್ಗೆ 
            ಒಪ್ಪಿಸಬೇಕು.ಯಾವುದೇ ದೇವರುಗಳು ಚಾಕು , ಕತ್ತಿ , ಮಚ್ಚು, ಬಾಕು ತ್ರಿಶೂಲ, ಚಕ್ರ   ಈ ತರಹದ sharp object 
             ಗಳನ್ನೂ ಇಟ್ಕೊಂಡು ಇರ್ತಾರೋ  ಎಲ್ಲರನ್ನು ವಶಕ್ಕೆ ತೆಗೆದುಕೊಳ್ಳಬೇಕಾಗಿ ಕೋರ್ಟ್ ಆದೇಶ ನೀಡೋತ್ತೆ, except 
            ಹನುಮಂತ ಈತ ಆರೋಪದಿಂದ ಮುಕ್ತಿ ಹೊಂದಿರುತ್ತಾನೆ , ಕಾರಣ , ಈ ದೇವರ ಅಸ್ತ್ರ ಗದೆ ಆಗಿದ್ದು ಇದು sharp
            object ಅಲ್ಲ,.ಮೇಲಾಗಿ ಇವರು ಕನ್ನಡಿಗ.

           ಇದಲ್ಲದೇ ಈ ದೇವರುಗಳನ್ನು ಪ್ರಚೋದಿಸುತ್ತಿರುರುವ ಎಲ್ಲ ಅರ್ಚಕರನ್ನು ಕೂಡ ವಶಕ್ಕೆ ತೆಗೆದು ಕೊಳ್ಳಬೇಕಾಗಿ
           ಕೋರ್ಟ್ ಆದೇಶ ನೀಡೋತ್ತೆ.

ವಕೀಲರು : ಯುವರ್ ಅನರ್ , ದೇವರು ಓಕೆ ಪೂಜಾರಿ ಯಾಕೆ ?

ನ್ಯಾ: ರೀ ಇವರೇ ..... ದಿನ ಪೂಜೆ ಮಾಡೋವಾಗ ಈ  ಅರ್ಚಕರು , ಸಂಸ್ಕೃತ ಯಾರಗೂ ಗೊತಗೋಲ್ಲ ಅಂತ.
         ಪ್ರತಿಯೊಂದು ಶ್ಲೋಕದ ಕೊನೇಲಿ  " ತನ್ನೋ ದಂತಿ ಪ್ರಚೋದೆಯಾತ್ ,, ತನ್ನೋ ರುದ್ರ ಪ್ರಚೋದೆಯಾತ್..."
          ಹೀಗೆ ಪ್ರಚೋದನಕಾರಿ ಮಂತ್ರ ಗಳನ್ನೂ ಹೇಳ್ತಾರೆ ಅದಿಕ್ಕೆ.